Sunday, 5th January 2025

BJP Protest: ಬಸ್ ಪ್ರಯಾಣ ದರ ಏರಿಕೆ; ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ

BJP Protest

ಬೆಂಗಳೂರು: ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ (Bus Fare Hike) ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ (State Congress Government) ವಿರುದ್ಧ ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ವಿನೂತನ ಮಾದರಿಯಲ್ಲಿ ಪ್ರತಿಭಟನೆ (BJP Protest) ನಡೆಸಲಾಯಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆಯ ವೇಳೆ ಕೆಲವು ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ಮುಖವಾಡ ಧರಿಸಿದ್ದರು. ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಲಾಯಿತು.

ಬಸ್ ದರ ಏರಿಕೆಯ ಉಡುಗೊರೆ

ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾಧ್ಯಮಗಳ ಜತೆ ಮಾತನಾಡಿ, ಕರ್ನಾಟಕದ 7 ಕೋಟಿ ಜನರು ಹೊಸ ವರ್ಷಕ್ಕೆ ಉಡುಗೊರೆಗೆ ಕಾಯುತ್ತಿದ್ದೆವು. ಮೋದಿಯವರು ಹೊಸ ವರ್ಷಕ್ಕೆ ನಿಜವಾದ ಗಿಫ್ಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ, ದಿ ಗ್ರೇಟ್ 14 ಬಜೆಟ್ ಚಾಂಪಿಯನ್ ಸಿದ್ದರಾಮಯ್ಯ ಅವರು ಬಸ್ ದರ ಏರಿಕೆಯ ಉಡುಗೊರೆ ನೀಡಿದ್ದಾರೆ ಎಂದು ಟೀಕಿಸಿದರು.

ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿದಿನ ತೆರಿಗೆ ಹೆಚ್ಚಳ, ಟ್ಯಾಕ್ಸ್ ಏರಿಕೆಯದೇ ಸಾಧನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿದೆ. ಆದರೆ, ಬೆಲೆ ಏರಿಕೆ ನಿರಂತರವಾಗಿ ಸಾಗಿದೆ ಎಂದು ಆರೋಪಿಸಿದರು.

ಗಂಡಸರಿಗೆ ಬರೆ

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹೆಣ್ಮಕ್ಕಳಿಗೆ ಉಚಿತ ಪ್ರಯಾಣದರ ನೀಡಿ, ಗಂಡಸರಿಗೆ ಬರೆ ಹಾಕುವ ಸರ್ಕಾರ ಇದು ಎಂದು ದೂರಿದ ಅವರು, ಗ್ಯಾರಂಟಿ ಕಾರಣಗಳಿಂದ ಇವತ್ತು ಜನರು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಹಾಲಿನ ದರ ಏರಿಸಿದ್ದೀರಿ. ವಿದ್ಯುತ್ ದರ ಏರಿಕೆ ಮಾಡಿದ್ದೀರಿ. ಸ್ಟಾಂಪ್ ಡ್ಯೂಟಿ, ರಿಜಿಸ್ಟ್ರೇಶನ್ ಶುಲ್ಕ ಮಾತ್ರವಲ್ಲದೆ ವಿವಿಧ ತೆರಿಗೆಗಳನ್ನೂ ಹೆಚ್ಚಿಸಲಾಗಿದೆ ಎಂದು ಖಂಡಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ರಾಜ್ಯದ ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಧಾರಿತ ಉದ್ಯೋಗಾವಕಾಶ; ಅಧಿಕಾರಿಗಳ ಜತೆ ಎಚ್.ಡಿ.ಕೆ ಮಹತ್ವದ ಸಭೆ

ಕಾಂಗ್ರೆಸ್ ಸರ್ಕಾರದ ಖಜಾನೆ ಪೂರ್ತಿ ಖಾಲಿಯಾಗಿದೆ. ದಿನ ದೂಡಲು ಬರೆ ಹಾಕುವ ಕೆಲಸ ಮಾಡಿದ್ದಾರೆ. ಮೂರನೇ ದಿನಕ್ಕೆ ಮೂರು ನಾಮ ಹಾಕುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.