ಉಡುಪಿ: ಜಿಲ್ಲೆಯ ತ್ರಾಸಿ ಬೀಚ್‌ನಲ್ಲಿ ಬೋಟ್ ಪಲ್ಟಿಯಾಗಿ(Boat Drowned) ರೈಡರ್ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಬೋಟ್‌ನಲ್ಲಿದ್ದ ಪ್ರವಾಸಿಗನನ್ನು ರಕ್ಷಿಸಲಾಗಿದ್ದು, ಕಣ್ಮರೆಯಾಗಿರುವ ರೈಡರ್‌ಗಾಗಿ ಭಾರೀ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನು ನಾಪತ್ತೆಯಾದ ರೈಡರ್‌ನನ್ನು ರವಿದಾಸ್ ಎಂದು ಗುರುತಿಸಲಾಗಿದೆ.
ನಡೆದಿದ್ದೇನು?
ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕೀ ಮಗುಚಿ ಬಿದ್ದಿತ್ತು. ರೈಡ್‌ಗೂ ಮೊದಲು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ.
ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್ ಎಂಬವರು ಟೂರಿಸ್ಟ್ ಬೋಟಿನಲ್ಲಿ ಬೋಟಿಂಗ್ ನಡೆಸುತ್ತಿರುವಾಗ ಬೋಟ್ ಪಲ್ಟಿ ಆದ ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದ ಪರಿಣಾಮ ರೈಡರ್ ನಾಪತ್ತೆಯಾಗಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಪರಿಣಾಮ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ.
ಮುರುಡೇಶ್ವರ ನಿವಾಸಿಯಾದ ರೋಹಿದಾಸ್ ತ್ರಾಸಿಯಲ್ಲಿಯೇ ವಾಸಿಸುತ್ತಿದ್ದು, ಜೆಟ್ ಸ್ಕೀ ಮತ್ತಿತರ ಬೋಟ್ ರೈಡ್ ಕಾಯಕ ಮಾಡಿಕೊಂಡಿದ್ದರು. ನಾಪತ್ತೆಯಾದ ರವಿದಾಸ್ ನ ಶೋಧ ಕಾರ್ಯ ನಡೆಯುತ್ತಿದ್ದು ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಪೊಲೀಸ್ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ತೆರಳಿದ್ದಾಗ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿದ್ದರು. ಮುಳಬಾಗಲು ತಾಲೂಕಿನ ಪೂಜಾರಹಳ್ಳಿ ಶ್ರಾವಂತಿ(15), ಎನ್.ಗಡ್ಡೂರು ದೀಕ್ಷಾ(15), ದೊಡ್ಡಗುಟ್ಟಳ್ಳಿ ವಂದನಾ(15) ಮತ್ತು ಹೆಬ್ಬಣಿ ಗ್ರಾಮದ ಲಾವಣ್ಯ(15) ಮೃತರು.
ಸಮುದ್ರಕ್ಕಿಳಿದಿದ್ದ ಏಳು ಬಾಲಕಿಯರ ಪೈಕಿ ನಾಲ್ವರು ನೀರುಪಾಲಾಗಿದ್ದರು. ಇನ್ನುಳಿದ ಬಾಳಸಂದ್ರ ವೀಕ್ಷಣಾ(15), ತಾತಿಘಟ್ಟ ಯಶೋಧಾ(15) ಹಾಗೂ ಕಲಿಕೇರಿ ಲಿಪಿತಾ(15) ಅವರನ್ನು ರಕ್ಷಣೆ ಮಾಡಿ ಮುರುಡೇಶ್ವರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Drowned: ಕುಂದಾಪುರ ಬೀಚ್‌ನಲ್ಲಿ ಇಬ್ಬರು ಸಹೋದರರು ನೀರುಪಾಲು, ಒಬ್ಬನ ರಕ್ಷಣೆ