Friday, 27th December 2024

Bomb Hoax: ರಾಮೇಶ್ವರಂ ಕೆಫೆ ಮಾದರಿಯಲ್ಲಿ ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

mangaluru airport

ಮಂಗಳೂರು: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ (Mangaluru International Airport) ರಾಮೇಶ್ವರಂ ಕೆಫೆ (Rameshwaram cafe) ಮಾದರಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ (Bomb hoax) ಕರೆ ಸಂದೇಶವೊಂದು ಬಂದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಬಗ್ಗೆ ಬೆದರಿಕೆ ಸಂದೇಶ ಬಂದ ಬಗ್ಗೆ ತಡವಾಗಿ ವರದಿಯಾಗಿದೆ. ನ.30ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಕ್ರಮ್ ವಾಯ್ಕರ್‌ ಎನ್ನುವ ಹೆಸರಲ್ಲಿದ್ದ ಇಮೇಲ್‌ನಿಂದ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಬಜಪೆ ಠಾಣೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ದೂರು ನೀಡಿದ್ದಾರೆ.

ತಮಿಳುನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್ ಪಿನ್ ಎನ್ನಲಾದ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ, ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಕೇಸನ್ನು ವಾಪಸ್ ಪಡೆಯಬೇಕು. ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್‌ಎಲ್‌ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಈ ಬೆದರಿಕೆ ಪತ್ರದಲ್ಲಿ ಬೇಡಿಕೆ ಮುಂದಿಡಲಾಗಿದೆ.

ಇದೇ ರೀತಿಯ ಬೆದರಿಕೆ ಸಂದೇಶ ಅಕ್ಟೋಬರ್ 25ರಂದು ತಿರುಪತಿಯ ಎರಡು ಪ್ರಸಿದ್ಧ ಹೊಟೇಲ್‌ಗಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್ ಸಾದಿಕ್ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖಿಸಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಅಲ್ಲಿನವರೇ ಈ ಕೃತ್ಯ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ. ಹಿಂದೆ ಕೂಡ ಮಂಗಳೂರು ವಿಮಾನ ನಿಲ್ದಾಣಕ್ಕೆ ಎರಡು ಮೂರು ಬಾರಿ ಬೆದರಿಕೆ ಸಂದೇಶ ಬಂದಿತ್ತು.

ಕಳೆದ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಿತ್ತು. ಪಾಕಿಸ್ತಾನದ ಬೆಂಬಲ ಪಡೆದಿದ್ದ, ಐಸಿಸ್‌ ಪ್ರಚೋದನೆಗೊಳಗಾಗಿದ್ದ ಭಯೋತ್ಪಾದಕರು ಇದನ್ನು ನಡೆಸಿದ್ದರು. ಇವರನ್ನು ಈಗ ಸೆರೆಹಿಡಿದು ತನಿಖೆ ನಡೆಸಲಾಗುತ್ತಿದೆ.