ಬೆಂಗಳೂರು: ಹೊಸ ವರ್ಷದ ಮೊದಲ ಸಚಿವ ಸಂಪುಟ ಸಭೆಯಲ್ಲೇ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು (Bus Fare Hike) ಶೇ. 15 ಹೆಚ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ಸೇರಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ದರ ಏರಿಕೆಗಿಂತ ತಮ್ಮ ಅವಧಿಯಲ್ಲಿ ಕಡಿಮೆಯೇ ಇದೆ ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಈ ಹಿಂದಿನ ಸರ್ಕಾರಗಳಲ್ಲಿ ಎಷ್ಟೆಟ್ಟು ಹೆಚ್ಚಳ ಮಾಡಲಾಗಿತ್ತು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶೇ.8.02 ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ನಂತರ 2008ರಿಂದ 2012ರವರೆಗೆ ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಒಟ್ಟು ಏಳು ಬಾರಿ ಶೇ.47.8ರಷ್ಟು ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿತ್ತು. ಅದೇ ರೀತಿ 2013ರಿಂದ 2015ರ ಅವಧಿಯಲ್ಲಿ (ಕಾಂಗ್ರೆಸ್ ಸರ್ಕಾರ) ಶೇ.18.46 ದರ ಹೆಚ್ಚಳವಾಗಿ, ನಂತರ ಶೇ.2ರಷ್ಟು ಕಡಿಮೆ ಮಾಡಲಾಗಿತ್ತು. ಇನ್ನು 2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ (ಬಿಎಂಟಿಸಿ ಹೊರತುಪಡಿಸಿ) ಶೇ. 12ರಷ್ಟು ಹೆಚ್ಚಿಸಲಾಗಿದೆ. ಈಗ ಹೆಚ್ಚಿಸಲು (ಕಾಂಗ್ರೆಸ್ ಸರ್ಕಾರ) ನಿರ್ಧರಿಸಿರುವ ದರ ಶೇ.15 ಆಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
2006ರಿಂದ 13 ಬಾರಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. ಆದರೆ, ಈಗ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆರ್.ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಒಟ್ಟು ಏಳು ಬಾರಿ ದರ ಪರಿಷ್ಕರಣೆ ಆಗಿದ್ದು, ಶೇ.47.8ರಷ್ಟು ಪ್ರಯಾಣ ದರ ಹೆಚ್ಚಿಸಲಾಗಿತ್ತು. ಆದರೆ, ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ವಿಪರ್ಯಾಸ ಎಂದು ಕೈ ನಾಯಕರು ಕಿಡಿಕಾರಿದ್ದಾರೆ.
ಜನವರಿ 5 ರಿಂದ ಪರಿಷ್ಕೃತ ದರ ಜಾರಿ
ರಾಜ್ಯ ಸರ್ಕಾರ ಕೆಎಸ್ಆರ್‌ಟಿಸಿ ಸೇರಿ ಎಲ್ಲಾ ಸಾರಿಗೆ ನಿಗಮಗಳ ಬಸ್‌ಗಳ ಟಿಕೆಟ್ ದರವನ್ನು ಶೇ.15 ಕ್ಕೆ ಏರಿಕೆ ಮಾಡಿದೆ. ಈ ಆದೇಶ ಜನವರಿ 5 ರಿಂದ ಜಾರಿಗೆ ಬರಲಿದೆ.
ಇದುವರೆಗೆ ಬೆಂಗಳೂರಿನಿಂದ ಮಡಿಕೇರಿಗೆ ಕರ್ನಾಟಕ ಸಾರಿಗೆ ಸಾಮಾನ್ಯ ಬಸ್ ನಲ್ಲಿ ಸಂಚರಿಸಲು 358 ರೂ.ಗಳಾಗುತ್ತಿತ್ತು. ಪರಿಷ್ಕೃತ ದರ 411 ರೂ.ಗಳಾಗಲಿವೆ. ಬೆಂಗಳೂರಿನಿಂದ ಮೈಸೂರಿಗೆ ಈಗ 185 ರೂ.ಗಳಿದ್ದು ಇನ್ನು 213 ರೂ.ಗಳಾಗಲಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಈ ಮೊದಲು 285 ರೂ. ಗಳಿತ್ತು. ಪರಿಷ್ಕೃತಗೊಂಡ ದರ 328 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಿಂದ ಹಾಸನಕ್ಕೆ ಈ ಮೊದಲು 246 ರೂ. ಪರಿಷ್ಕೃತ ದರ 282 ರೂ. ಆಗಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಈ ಮೊದಲು 424 ರೂ. ದರವಿತ್ತು, ಪರಿಷ್ಕೃತ ದರ 477 ರೂ.ಗೆ ಏರಿಕೆಯಾಗಲಿದೆ. ಬೆಂಗಳೂರಿನಿಂದ ರಾಯಚೂರಿಗೆ ಈ ಮೊದಲು 556 ರೂ.ಗಳಷ್ಟಿತ್ತು. ಇನ್ನು 639 ರೂ.ಗೆ ಏರಿಕೆಯಾಗಲಿದೆ. ಇನ್ನು ಬೆಂಗಳೂರಿನಿಂದ ಬಳ್ಳಾರಿಗೆ ಈ ಮೊದಲು 376 ರೂ.ಗಳಿದ್ದರೆ ಇನ್ನು 432 ರೂ.ಗಳಾಗಲಿದೆ.
ಕೇವಲ ಕೆಎಸ್‌ಆರ್‌ಟಿಸಿ ಮಾತ್ರವಲ್ಲ, ಬಿಎಂಟಿಸಿ ಬಸ್ ದರವೂ ಏರಿಕೆಯಾಗಿದೆ. ಇದುವರೆಗೆ ಮೆಜೆಸ್ಟಿಕ್‌ನಿಂದ ಜಯನಗರಕ್ಕೆ 20 ರೂ.ಗಳಷ್ಟು ಟಿಕೆಟ್ ದರವಿತ್ತು. ಇನ್ನು 23 ರೂ.ಗಳಾಗಲಿವೆ. ಅದೇ ರೀತಿ ಸರ್ಜಾಪುರಕ್ಕೆ 25 ರೂ.ಗಳಷ್ಟು ಇದ್ದಿದ್ದು ಇನ್ನು 28 ರೂ.ಗಳಾಗಲಿದೆ. ಇದೇ ರೀತಿ ವಿವಿಧ ಭಾಗಗಳಲ್ಲಿ ಈಗ ಇರುವ ಬೆಲೆಗಿಂತ ಸುಮಾರು 3 ರೂ.ಗಳಷ್ಟು ಏರಿಕೆಯಾಗಲಿದೆ.
ಈ ಸುದ್ದಿಯನ್ನೂ ಓದಿ | HD Kumaraswamy: ಆರೋಪಿ ಐಶ್ವರ್ಯ ಗೌಡ ನಿಖಿಲ್‌ನನ್ನು ಯಾವಾಗ ಭೇಟಿಯಾಗಿದ್ದಳು ತಿಳಿಸಿ; ಕುಮಾರಸ್ವಾಮಿ ಸವಾಲು