Thursday, 26th December 2024

BY Vijayendra: ಬಳ್ಳಾರಿಯಲ್ಲಿ ಬಾಣಂತಿಯರು, ಶಿಶು ಸಾವು ಪ್ರಕರಣ; ನ್ಯಾಯಾಂಗ ತನಿಖೆಗೆ ವಿಜಯೇಂದ್ರ ಆಗ್ರಹ

BY Vijayendra

ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮತ್ತು ಶಿಶುವಿನ ಮರಣ ಸಂಬಂಧ ರಾಜ್ಯದ ಕಾಂಗ್ರೆಸ್ ಸರ್ಕಾರದ (State Congress Government) ಅಮಾನವೀಯ ನಡೆಯನ್ನು ಜನರು ಪ್ರಶ್ನಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬಳ್ಳಾರಿ ದುರ್ಘಟನೆ ಸಂಬಂಧ ಸೂಕ್ತ ನ್ಯಾಯಾಂಗ ತನಿಖೆ ಮಾಡಿಸಬೇಕು ಹಾಗೂ ಮೃತ ಗರ್ಭಿಣಿಯರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಬ್ಲ್ಯಾಕ್ ಲಿಸ್ಟ್ ಆದ ಕಂಪನಿಯಿಂದ ಇವರು ಐವಿ ಗ್ಲುಕೋಸ್ ಖರೀದಿಸಿದ್ದರು. ಬಳ್ಳಾರಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ದುರ್ಘಟನೆಯಲ್ಲಿ 7 ಜನ ಬಾಣಂತಿಯರು ಮತ್ತು ಮಗು ಸಾವನ್ನಪ್ಪಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಇಲ್ಲಿಗೆ ಭೇಟಿ ಕೊಟ್ಟಿಲ್ಲ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | PMSGMBY: ಸೂರ್ಯ ಘರ್ ಯೋಜನೆ; ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಿ!

ರಾಜ್ಯ ಸರ್ಕಾರವೇ ಈ ದುರ್ಘಟನೆಗೆ ಹೊಣೆ ಹೊರಬೇಕು

ಜಮೀರ್ ಅಹ್ಮದ್ ಬಿಡಿ ಉಸ್ತುವಾರಿ ಸಚಿವರು. ಅವರಿಗೂ ಇದಕ್ಕೂ ಸಂಬಂಧವೇ ಇಲ್ಲ. ಅವರು ವಕ್ಫ್ ವಿಚಾರದಲ್ಲಿ ಬ್ಯುಸಿ ಇದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಸರ್ಕಾರದ ಅಮಾನವೀಯ ನಡೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ಬ್ಲ್ಯಾಕ್ ಲಿಸ್ಟ್ ಆದ ಕಂಪನಿಯಿಂದ ಖರೀದಿ ಮಾಡಿದ್ದು, ರಾಜ್ಯ ಸರ್ಕಾರವೇ ಈ ದುರ್ಘಟನೆಗೆ ಹೊಣೆ ಹೊರಬೇಕೆಂದು ಆಗ್ರಹಿಸಿದರು.

ರಾಜ್ಯದ ಪರಿಸ್ಥಿತಿ ಏನೆಂದು ಗಮನಿಸಲು ಒತ್ತಾಯ

ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರ ತಂಡವು ಲೋಕಾಯುಕ್ತವನ್ನು ಇವತ್ತು ಭೇಟಿ ಮಾಡಲಿದೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮರೆತಿದೆ. ನಿನ್ನೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಲು ಮುಖ್ಯಮಂತ್ರಿ ಹೊರಟರೆ, ಜನಕಲ್ಯಾಣ ಸಮಾವೇಶವೆಂದು ಹೆಸರು ಬದಲಿಸಿ ಕಾರ್ಯಕ್ರಮ ಮಾಡಿದ್ದಾರೆ. ಜನಕಲ್ಯಾಣ ಸಮಾವೇಶ ಇರಲಿ, ರಾಜ್ಯದ ಪರಿಸ್ಥಿತಿ ಏನೆಂದು ಮುಖ್ಯಮಂತ್ರಿ ಗಮನಿಸಬೇಕು ಎಂದು ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.

ತೊಗರಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಪ್ರವಾಸ ಮಾಡಿ ಬಂದಿದ್ದೇನೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತೊಗರಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಒಂದು ಎಕರೆಗೆ ಆರೇಳು ಕ್ವಿಂಟಲ್ ಬೆಳೆ ಬದಲು ಒಂದೂವರೆ ಎರಡು ಕ್ವಿಂಟಲ್ ಬೆಳೆ ಬಂದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕಲಬುರಗಿ ಜಿಲ್ಲೆಯೊಂದರಲ್ಲೇ ಆರರಿಂದ 7 ಲಕ್ಷ ಎಕರೆಯಲ್ಲಿ ತೊಗರಿ ಬೆಳೆಯುತ್ತಾರೆ. ಆದರೆ, ಶೇ.80 ರಷ್ಟು ಬೆಳೆ ರೋಗದಿಂದ ನಾಶವಾಗಿದೆ. ರಾಜ್ಯ ಸರ್ಕಾರವು ಸರ್ವೇ, ಹಾನಿಯ ಕುರಿತು ನಿರ್ಧರಿಸುವ ಕಷ್ಟವನ್ನೇ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದ ಅವರು, ರಾಜ್ಯ ಸರ್ಕಾರ ಸರ್ವೇ ಮಾಡಿ ಹಾನಿಯ ಪ್ರಮಾಣವನ್ನು ತಿಳಿದುಕೊಂಡು ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈ ಸುದ್ದಿಯನ್ನೂ ಓದಿ | KEA Recruitment: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಇಎ; ವಿವರ ಇಲ್ಲಿ ನೋಡಿ

ಒಂದೆಡೆ ರೈತರು ಬೀದಿಗೆ ಬಂದಿದ್ದರೆ ಮತ್ತೊಂದೆಡೆ ಇವರ ಯೋಗ್ಯತೆಗೆ ಜನಕಲ್ಯಾಣ ಸಮಾವೇಶ ಎಂದು ಟೀಕಿಸಿದ ಅವರು, ಈ ಸರ್ಕಾರದ ಬೇಜವಾಬ್ದಾರಿ ವರ್ತನೆಗೆ ಜನರು ಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.