ಬೆಂಗಳೂರು: ಅತ್ಯಂತ ಕಡಿಮೆ ಅವಧಿಯಲ್ಲಿ ಈ ದುಷ್ಟ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ವಿಶ್ವಾಸ, ಜನಪ್ರಿಯತೆಯನ್ನು ಕಳೆದುಕೊಂಡಿದೆ. ಕಳೆದ 2 ತಿಂಗಳುಗಳಿಂದ ರಾಜ್ಯದ ಆಡಳಿತ ಪಕ್ಷ ಇದೆ ಎಂಬುದನ್ನು ಜನರೇ ಮರೆತುಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಮುಡಾದಲ್ಲಿ ಪ್ರತಿ ಹಂತದಲ್ಲೂ ಕೂಡ ಸಿದ್ದರಾಮಯ್ಯನವರ ನಾಮಬಲದ ಮೇಲೆ ಎಲ್ಲವೂ ಅಕ್ರಮವಾಗಿ ನಡೆದುಕೊಂಡು ಹೋಗಿದೆ. ಅಲ್ಲದೆ, ಶೇ 50: 50 ಅನುಪಾತದಲ್ಲೇ ತಮ್ಮ ಪತ್ನಿಗೆ ನಿವೇಶನಗಳು ಲಭಿಸಿವೆ, ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಅದು ಆಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಇದ್ದಾಗ ಶೇ.50- 50 ಅನುಪಾತದಲ್ಲಿ ನಿವೇಶನ ನೀಡಲು ಒಪ್ಪಿಗೆ ಕೊಟ್ಟಿರಲಿಲ್ಲ. ಕೆಲವು ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಿದ್ದರಾಮಯ್ಯನವರ ಕುಟುಂಬಕ್ಕೆ ಖುಷಿ ಪಡಿಸಲು ಅಕ್ರಮವಾಗಿ ಇದೆಲ್ಲವನ್ನೂ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಂದು ಕಡೆ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಜತೆಗೇ ಹಗರಣಗಳೂ ನಡೆದಿವೆ. ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣ ಇವುಗಳಲ್ಲಿ ಪ್ರಮುಖವಾದವು. ದಲಿತ ಕುಟುಂಬದ ನಿಂಗ ಎಂಬವರು 1936ರಲ್ಲಿ ಮೈಸೂರಿನ ಕೆಸರೆಹಳ್ಳಿ ಗ್ರಾಮದಲ್ಲಿ ಹರಾಜಿನಲ್ಲಿ 3.16 ಎಕರೆ ಜಮೀನು ಪಡೆದಿದ್ದರು. ಅವರ ನಿಧನಾನಂತರ 3 ಮಕ್ಕಳಿಗೆ ಅದು ಭಾಗವಾಗಿತ್ತು. ಮೈಲಾರಪ್ಪ, ದೇವರಾಜು, ಲಿಂಗ ಎಂಬವರಿಗೆ ವಿಭಾಗವಾಗಿತ್ತು. 1970ರಲ್ಲಿ ಮೈಲಾರಪ್ಪನಿಗೆ ಈ ಜಮೀನನ್ನು ಇತರ ಇಬ್ಬರು ವರ್ಗಾವಣೆ ಮಾಡಿದ್ದರು. 1992ರಲ್ಲಿ ದೇವರಾಜು ಅವರು ಖಾತೆ ಮಾಡಿಸಲು ಉಳಿದವರಿಂದ ಪತ್ರ ಬರೆಸಿಕೊಂಡಿದ್ದರು. ತದನಂತರ ಅದನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡದ್ದನ್ನು ವಿವರಿಸಿದರು.
ದೇವರಾಜು ಹೆಸರಿನಲ್ಲಿ ಡಿನೋಟಿಫಿಕೇಶನ್, ಮುಖ್ಯಮಂತ್ರಿಗಳ ಭಾವಮೈದನಿಂದ ಖರೀದಿ, ಅರಶಿನ ಕುಂಕುಮ ಎಂದು ಮುಖ್ಯಮಂತ್ರಿಗಳ ಪತ್ನಿಗೆ ನೀಡಿದ್ದನ್ನು ತಿಳಿಸಿದರು. ಮುಖ್ಯಮಂತ್ರಿಗಳ ಭಾವಮೈದ ಖರೀದಿಗೂ ಮೊದಲೇ ಮುಡಾದಿಂದ ಜಮೀನನ್ನು ವಶಕ್ಕೆ ಪಡೆದು ನಿವೇಶನಗಳ ಅಭಿವೃದ್ಧಿ, ಕೆಲವು ನಿವೇಶನಗಳ ಮಾರಾಟ ನಡೆದಿತ್ತು. ಎಲ್ಲವನ್ನೂ ಮರೆಮಾಚಿ 98ರಲ್ಲಿ ಡಿನೋಟಿಫಿಕೇಶನ್ ಆದಾಗ ಸ್ವತಃ ಸಿದ್ದರಾಮಯ್ಯನವರೇ ಉಪ ಮುಖ್ಯಮಂತ್ರಿ ಆಗಿದ್ದರು ಎಂದು ಮಾಹಿತಿ ಕೊಟ್ಟರು. ಅವರೇ ಮೈಸೂರಿನ ಉಸ್ತುವಾರಿ ಸಚಿವರೂ ಆಗಿದ್ದರು ಎಂದರು.
ನಮ್ಮದು ಕಾಟಾಚಾರದ ಹೋರಾಟವಲ್ಲ
ಒಂದು ವಿರೋಧ ಪಕ್ಷವಾಗಿ ಆಡಳಿತ ಪಕ್ಷವನ್ನು ಕೇವಲ ವಿರೋಧಿಸಲು ಹೋರಾಟ ಕೈಗೆತ್ತಿಕೊಂಡಿಲ್ಲ. ಹೊಸ ಸರ್ಕಾರ ಬಂದಾಗ ಒಂದು ವರ್ಷ ಕಾಲಾವಕಾಶ ಕೊಡಬೇಕಾಗುತ್ತದೆ. ಎಷ್ಟೇ ಅನುಭವವಿದ್ದರೂ ಸರಕಾರ ಸರಿಯಾದ ಹಾದಿಯಲ್ಲಿ ನಡೆಯಲು ಸಮಯ ಬೇಕಾಗುತ್ತದೆ. ಅದರರ್ಥ ಭ್ರಷ್ಟಾಚಾರದಲ್ಲಿ ಮುಳುಗಬೇಕು ಎಂದಲ್ಲ ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲಿ ದಿನ ಬೆಳಗಾದರೆ ಹೋರಾಟಗಳು ನಡೆಯುತ್ತಿವೆ. ಆಡಳಿತ ಪಕ್ಷದವರು ಅಲ್ಲಿ- ಇಲ್ಲಿ ಕಾರ್ಯಕರ್ತರ ಮೇಲೆ ಕೇಸು ಹಾಕುತ್ತಾರೆ. ಕಾನೂನು ಪ್ರಕೋಷ್ಠದ ನೆರವಿಲ್ಲದೆ ನಾವು ನಡೆದಾಡಲೂ ಸಾಧ್ಯವಿಲ್ಲ. ಶಿವಮೊಗ್ಗದಲ್ಲಿ ನಡೆದ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಬಳಿಕ ಈ ಸರಕಾರದ ಹಗರಣಗಳು ಜನರನ್ನು ತಲುಪುತ್ತಿವೆ. ರಾಜ್ಯದ ದುಷ್ಟ ಕಾಂಗ್ರೆಸ್ ಸರಕಾರದ ದಿನಕ್ಕೊಂದು ಹೊಸ ಪ್ರಕರಣಗಳನ್ನು ನಾವು ನೋಡುವಂತಾಗಿದೆ ಎಂದು ತಿಳಿಸಿದರು.
ಚಂದ್ರಶೇಖರ್ ಅವರ ಆತ್ಮಹತ್ಯೆ ಬಳಿಕ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿಲ್ಲ ಎಂದು ತಮ್ಮ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಲು ಕಾಂಗ್ರೆಸ್ಸಿಗರು ಮುಂದಾಗಿದ್ದರು. ಆದರೆ, ಬಳಿಕ ಅದೇ ಮುಖ್ಯಮಂತ್ರಿಗಳು ಸಚಿವ ನಾಗೇಂದ್ರರ ರಾಜೀನಾಮೆ ಪಡೆದಿದ್ದಾರೆ. ಸದನದ ಒಳಗಡೆ ಹಗರಣ ನಡೆದುದು ಹೌದು, 187 ಕೋಟಿ ಅವ್ಯವಹಾರ ಆಗಿಲ್ಲ, ಆದರೆ, 87 ಕೋಟಿ ಹಗರಣ ಎಂದು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಅನುಭವಿ ಮುಖ್ಯಮಂತ್ರಿಗಳು, ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡಿದ ಸಿದ್ದರಾಮಯ್ಯನವರೇ, ಭ್ರಷ್ಟಾಚಾರ 87 ಕೋಟಿ ಆದರೇನು, 187 ಕೋಟಿ ಆದರೇನು 87 ಲಕ್ಷವಾದರೇನು? ಒಂದು ಲಕ್ಷವಾದರೇನು ಎಂದು ಪ್ರಶ್ನಿಸಿದರು. ಗೊತ್ತಿಲ್ಲ ಪಾಪ ಅವರಿಗೆ ಎಂದು ಟೀಕಿಸಿದರು. ನಮ್ಮ ಹೋರಾಟಕ್ಕೆ ಮಣಿದು ಅದು 87 ಕೋಟಿ ಎಂದು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಮೈಸೂರಿನ ಮುಡಾ ಹಗರಣದ ಸಂಬಂಧ ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೆದಿದೆ. ಅದು ತಾರ್ಕಿಕ ಅಂತ್ಯಕ್ಕೆ ಬಂದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ದೊಡ್ಡ ಸಂಖ್ಯೆಯಲ್ಲಿ ಯುವಕರು ಬೆಂಗಳೂರು- ಮೈಸೂರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಇದು ದೊಡ್ಡ- ಯಶಸ್ವಿ ಪಾದಯಾತ್ರೆ ಎಂದು ವಿಶ್ಲೇಷಿಸಿದರು. ಕಾನೂನು ಪ್ರಕೋಷ್ಠ ಸೇರಿ ಎಲ್ಲ ಮೋರ್ಚಾಗಳೂ ಭಾಗವಹಿಸಿದ್ದವು ಎಂದರು.
ಬಿಜೆಪಿಯಲ್ಲಿ ಅನೇಕ ಪ್ರಕೋಷ್ಠಗಳಿವೆ. ಎಲ್ಲ ಪ್ರಕೋಷ್ಠಗಳಿಗೂ ಅದರದ್ದೇ ಆದ ಜವಾಬ್ದಾರಿಗಳಿವೆ. ಕಾನೂನು ಪ್ರಕೋಷ್ಠದ ಮೊದಲ ರಾಜ್ಯ ಕಾರ್ಯಕಾರಿಣಿ ಇದಾಗಿದೆ. ಕಾನೂನು ಪ್ರಕೋಷ್ಠವು ಪಕ್ಷದ ವಿಚಾರದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಪರಿಚಯಾತ್ಮಕ ಭಾಷಣ ಮಾಡಿದ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಅವರು, ಶೇ.95 ಜಿಲ್ಲಾ ಸಂಚಾಲಕರ ನೇಮಕಾತಿ ನಡೆದಿದೆ ಎಂದು ವಿವರಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಕಾನೂನು ಹೋರಾಟಕ್ಕೆ ಸಹಕರಿಸುತ್ತಿದ್ದೇವೆ. ಮೂಡ ಹಗರಣದ ವಿರುದ್ಧ ಪಾದಯಾತ್ರೆಗೆ ಸಹಕಾರ ಕೊಡುವ ಜೊತೆಗೆ ಕಾನೂನು ಹೋರಾಟವನ್ನೂ ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರೀ, ಕಾನೂನು ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಲಕ್ಷ್ಮಣ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯರಾದ ಟಿ.ಎಸ್.ವಿಶ್ವನಾಥ, ಯಶವಂತ, ಶ್ರೀಮತಿ ವೀಣಾ ಅರುಣ, ಬಿ.ವಿ.ಶ್ರೀನಿವಾಸ, ರಮೇಶ್ ಎಸ್. ಸುಲ್ತಾನ್‍ಪುರ್, ಜಿಲ್ಲಾ ಸಂಚಾಲಕರು, ಸಹ ಸಂಚಾಲಕರು, ಕಾನೂನು ಪ್ರಕೋಷ್ಠದ ಆಹ್ವಾನಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.