Saturday, 11th January 2025

C T Ravi: ಬೆಳಗಾವಿ ಅಭಿನೇತ್ರಿಯ ಕಾಲು ಹಿಡಿದು ಕ್ಷಮೆ ಕೇಳಬೇಕು: ಸಿ.ಟಿ.ರವಿಗೆ ಜೀವ ಬೆದರಿಕೆ

C T Ravi

ಚಿಕ್ಕಮಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬಿಜೆಪಿ ವಿಧಾನ ಪರಿಷತ್​​ ಸದಸ್ಯ ಸಿ.ಟಿ. ರವಿ (C T Ravi) ಅವರಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. ಬೆಳಗಾವಿ ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಪುತ್ರ ಸೂರ್ಯನನ್ನು ಹತ್ಯೆ ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಸಿ.ಟಿ.ರವಿ ಅವರ ಚಿಕ್ಕಮಗಳೂರಿನ ಬಸವನಹಳ್ಳಿಯ ನಿವಾಸಕ್ಕೆ ಬೆದರಿಕೆ ಪತ್ರ ಬಂದಿದ್ದು, ಈ ಬಗ್ಗೆ ಸಿ.ಟಿ. ರವಿ ಪಿಎ ಚೇತನ್​ ಬಸವನಹಳ್ಳಿ ಪೊಲೀಸ್ ‌ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಮಾತನಾಡಿ, ಅಪರಿಚಿತ ವ್ಯಕ್ತಿಗಳಿಂದ ಎಂಎಲ್‌ಸಿ ಸಿ‌.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿ.ಟಿ.ರವಿ ಅವರಿಗೆ ಹೆಚ್ಚಿನ ಭದ್ರತೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಬೆದರಿಕೆ ಪತ್ರದಲ್ಲಿ ಏನಿದೆ?
15 ದಿನದೊಳಗೆ ಚಿಕ್ಕಮಗಳೂರಿನಿಂದ ಬಂದು ಬೆಳಗಾವಿ ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಕೈಕಾಲು ಮುರಿದು ಸಾಯಿಸುತ್ತೇವೆ. ನಿನ್ನ ಮಗನನ್ನು ಸಾಯಿಸುತ್ತೇವೆ ಹುಷಾರಾಗಿ ಇರಿ ಎಂದು ಬೆದರಿಕೆ ಪತ್ರದಲ್ಲಿದೆ.

ಏನಿದು ಪ್ರಕರಣ?
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕೊನೆಯ ದಿನ ಡಿ.19 ರಂದು ಪರಿಷತ್‌ನಲ್ಲಿ ಅಮಿತ್‌ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಆಗ ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದರು.

ಸಚಿವೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಆಕ್ರೋಶಗೊಂಡ ಜನರ ಗುಂಪೊಂದು ಸಿ.ಟಿ. ರವಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿತ್ತು. ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಸಿ.ಟಿ. ರವಿ ಅವರು ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು.

ಈ ಸುದ್ದಿಯನ್ನೂ ಓದಿ | Viral Post: ಪ್ಲೀಸ್‌.. ತಂದೆಗೊಂದು ಕೆಲಸ ಕೊಡಿ; ಮಗಳ ಹೃದಯಸ್ಪರ್ಶಿ ಪೋಸ್ಟ್ ಫುಲ್‌ ವೈರಲ್‌

Leave a Reply

Your email address will not be published. Required fields are marked *