Thursday, 26th December 2024

Cabinet Meeting: 28,405 ಕೋಟಿ ವೆಚ್ಚದಲ್ಲಿ ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾಮಗಾರಿಗೆ ಸಚಿವ ಸಂಪುಟ ಒಪ್ಪಿಗೆ

Cabinet Meeting

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ 3 ಹಂತದಲ್ಲಿ 28,405 ಕೋಟಿ ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿ (Hebbal-Sarjapur line), 2,500 ಕೋಟಿ ವೆಚ್ಚದಲ್ಲಿ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ 694 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯ 389.68 ಕಿ.ಮೀ. ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಸೇರಿ ಪ್ರಮುಖ ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ (Cabinet Meeting) ಅನುಮೋದನೆ ನೀಡಿದೆ.

ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆದಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024, ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2024, ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ 2024, ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2024 ಮಸೂದೆ ಮಂಡಿಸಲು ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

  • ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ.
  • ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ಸಮಾಜ ಕಲ್ಯಾಣ ಭವನವನ್ನು ₹40 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
  • ವಸತಿ ಶಾಲೆ / ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು ಮತ್ತು KREIS ವಸತಿ ಶಾಲೆ / ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ₹32.95 ಕೋಟಿ ವೆಚ್ಚದಲ್ಲಿ ಶೇಂಗಾ ಚಿಕ್ಕಿ ಮತ್ತು ಪೌಷ್ಠಿಕಾಂಶದ ಪುಡಿಯನ್ನು ಖರೀದಿಸಿ, ಒದಗಿಸಲು ತೀರ್ಮಾನ.
  • ಹೊಸಕೋಟೆ ತಾಲೂಕಿನ ರಸ್ತೆ ಅಭಿವೃದ್ಧಿಗೆ ₹54.25 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲು ತೀರ್ಮಾನ.
  • ಅಲ್ಪಸಂಖ್ಯಾತ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳಿಗೆ ಕಡ್ಡಾಯ ಪ್ರವೇಶಕ್ಕೆ ರಿಯಾಯಿತಿ ಒದಗಿಸುವ ಪ್ರಸ್ತಾವನೆಗೆ ಸಮ್ಮತಿ.
  • ₹694 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯ 389.68 ಕಿ.ಮೀ. ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ತೀರ್ಮಾನ.
  • ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ.
  • ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ₹19.70 ಕೋಟಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಲು ಒಪ್ಪಿಗೆ.
  • ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ 2024ಕ್ಕೆ ಅನುಮೋದನೆ.
  • ₹2,500 ಕೋಟಿ ವೆಚ್ಚದಲ್ಲಿ ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ತೀರ್ಮಾನ
  • ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್ ಹಾಗೂ ಎಲೆಕ್ಟಿಕ್ ಹೀಟ್ ಪಂಪ್‌ಗಳನ್ನು ₹42 ಕೋಟಿ ವೆಚ್ಚದಲ್ಲಿ ಪೂರೈಸಲು ಆಡಳಿತಾತ್ಮಕ ಅನುಮೋದನೆ.
  • ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿಯಿಂದ ಯಡ್ರಾಮಿವರೆಗಿನ ರಸ್ತೆ ಕಾಮಗಾರಿಯನ್ನು ₹25 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ತೀರ್ಮಾನ.
  • ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಯನ್ನು ₹97 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ.
  • ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆಗಳನ್ನು ವಿಲೀನಗೊಳಿಸಿ, ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಎಂದು ಮರುನಾಮಕರಣ ಮಾಡಲು ಒಪ್ಪಿಗೆ.
  • ಮಂಗಳೂರು – ಚೇರ್ವತ್ತೂರು – ಕರಾವಳಿ ಜಿಲ್ಲಾ ಮುಖ್ಯ ರಸ್ತೆಯ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 200 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • 28,405 ಕೋಟಿ ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಗೆ ಅನುಮೋದನೆ.
  • ಬೆಂಗಳೂರು ನಗರ ಜಿಲ್ಲೆಯ ಹುಸ್ಕೂರು ಗ್ರಾಮದಲ್ಲಿ ಕೆಟಿಪಿಪಿ ಕಾಯ್ದೆಯಡಿ ಬಹುಮಹಡಿ ವಸತಿ ಸಮುಚ್ಚಯ ಯೋಜನೆಯನ್ನು ಕೈಗೊಳ್ಳಲು ತೀರ್ಮಾನ.
  • ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಅಪರೂಪದ ಮತ್ತು ಹೆಚ್ಚಿನ ವೆಚ್ಚದ ಕಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆಗಾಗಿ ₹47 ಕೋಟಿ ವ್ಯಯಿಸಲು ಒಪ್ಪಿಗೆ ನೀಡಲಾಗಿದೆ.

ಸರ್ಜಾಪುರದಿಂದ ಹೆಬ್ಬಾಳದವರೆಗಿನ ಮೆಟ್ರೋ ಮಾರ್ಗ

ಸರ್ಜಾಪುರದಿಂದ ಹೆಬ್ಬಾಳದವರೆಗಿನ ಮೆಟ್ರೋ ಮಾರ್ಗದ ಕಾಮಗಾರಿಗೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಸುಮಾರು 15,000 ಕೋಟಿ ರೂ. ಯೋಜನೆಯನ್ನು ಸರ್ಜಾಪುರ ಹಾಗೂ ಹೆಬ್ಬಾಳ ಕಾರಿಡಾರ್‌ ಅಡಿ ಘೋಷಿಸಿದ್ದರು. ಆದರೆ ಯಾವುದೇ ಬೆಳವಣಿಗೆಗಳು ಆನಂತರ ಆಗಿರಲಿಲ್ಲ.

ಮೆಟ್ರೋ ವಿಸ್ತರಿಸುವ ವಿಸ್ತೃತ ವರದಿಯನ್ನು ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌( BMRCL) ಇತ್ತೀಚೆಗೆ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಮಾರ್ಗದಲ್ಲಿ 17 ಮೆಟ್ರೋ ನಿಲ್ದಾಣಗಳು, 22.14 ಕಿ.ಮೀ ಎತ್ತರಿಸಿದ ಮಾರ್ಗ, 11 ನಿಲ್ದಾಣಗಳನ್ನನೊಳಗೊಂಡ 14.45 ಕಿ.ಮೀ ಸರಂಗ ಮಾರ್ಗಗಳನ್ನು ಒಳಗೊಂಡಿದೆ. ಇದರಲ್ಲಿ ಸರ್ಜಾಪುರ, ಕಾಡ ಅಗ್ರಹಾರ ರಸ್ತೆ, ಸೋಂಪುರ, ದೊಮ್ಮಸಂದ್ರ, ಮುತ್ತಾನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮೆಲರಂ, ದೊಡ್ಡಕನ್ನೆಲ್ಲಿ, ಕೈಕೊಂಡ್ರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಶಾಂತಿನಗರ, ಡೈರಿ ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೆಕ್ರಿ ಸರ್ಕಲ್, ವೆಟರ್ನರಿ ಕಾಲೇಜು, ಗಂಗಾನಗರ ಮತ್ತು ಹೆಬ್ಬಾಳ ನಿಲ್ದಾಣಗಳು ಬರಲಿವೆ.

ಈ ಸುದ್ದಿಯನ್ನೂ ಓದಿ | CM Siddaramaiah: ಬಸವಣ್ಣ, ಬುದ್ಧನ ನಂತರ ಸಮಾನತೆಗೆ ಹೋರಾಡಿದವರು ಅಂಬೇಡ್ಕರ್; ಸಿದ್ದರಾಮಯ್ಯ