ಬೆಂಗಳೂರು: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಸಾರಿಗೆ ಬಸ್ಸುಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ(Cabinet Meeting) ಅಸ್ತು ಎಂದಿದೆ. ಹೀಗಾಗಿ ಶೀಘ್ರವೇ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳದ ಶಾಕ್ ಜನತೆಗೆ ಉಂಟಾಗಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೇರಿದಂತೆ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಸಭೆಯಲ್ಲಿ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆ ಕುರಿತಂತೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಶೇ.15ರಷ್ಟು ಪ್ರಯಾಣ ದರ ಏರಿಕೆಗೆ ಸಂಪುಟ ಅನುಮೋದನೆ ನೀಡಿದೆ.
ಸಾರಿಗೆ ಬಸ್ಸುಗಳ ಪ್ರಯಾಣದರವನ್ನು ಶೇ.42ರಷ್ಟು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಈ ಬಗ್ಗೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಅಂತಿಮವಾಗಿ, ಶೇ.15ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಯಿತು. ಹೀಗಾಗಿ ಶೀಘ್ರವೇ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಜಾರಿಗೆ ಬರಲಿದೆ. ಆ ಮೂಲಕ ಕೆ ಎಸ್ ಆರ್ ಟಿಸಿ ಬಸ್ ಟಿಕೆಟ್ ದರದಲ್ಲಿ ಹೆಚ್ಚಳ ಕೂಡ ಆಗಲಿದೆ.
ಇನ್ನು ಈ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದು, 2014ರಲ್ಲಿ BMTC ಮತ್ತು 2020ರಲ್ಲಿ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ ದರಗಳನ್ನು ಪರಿಷ್ಕರಿಸಲಾಗಿತ್ತು. ದರ ಪರಿಷ್ಕರಣೆ ನಂತರ ಡೀಸೆಲ್ ಮತ್ತು ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿವೆ. ಜತೆಗೆ ಸಿಬ್ಬಂದಿ ವೇತನವೂ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ:CM Siddaramaiah: ಹೊಸ ವರ್ಷಕ್ಕೆ ಸಹಬಾಳ್ವೆಯ ಆಶಯ ಕೋರಿದ ಸಿಎಂ ಸಿದ್ದರಾಮಯ್ಯ