ಬೆಂಗಳೂರು: ರಾಜಧಾನಿಯಲ್ಲಿ ಸಿಸಿಬಿ ಪೊಲೀಸರು (CCB Raid) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇರಳ ಮೂಲದ ವ್ಯಕ್ತಿ ಸೇರಿ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ, 71 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಹೊಸ ವರ್ಷಾಚರಣೆಗೆ ಮಾದಕ ವಸ್ತುಗಳು ಸರಬರಾಜು ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ಕಾರ್ಯಾಚರಣೆ ನಡೆಸಿದೆ.
ಆರೋಪಿಗಳು ಕುಮಾರಸ್ವಾಮಿ ಲೇಔಟ್ನ ಚಂದ್ರಾನಗರದಲ್ಲಿನ ಮನೆಯೊಂದರಲ್ಲಿ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್, 520 ಗ್ರಾಂ ಹೈಡ್ರೋ ಗಾಂಜಾ, 2 ಕೆಜಿ 223 ಗ್ರಾಂ ಗಾಂಜಾ ಮತ್ತು ತೂಕದ ಯಂತ್ರ, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೇರಳದಿಂದ ಕಡಿಮೆ ಬೆಲೆಗೆ ಮಾದಕ ವಸ್ತುವನ್ನು ತಂದು, ಇಲ್ಲಿ ಮಾರುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇನ್ನು, ಜೈಲು ಸೇರಿದ ಆರೋಪಿ ಕೂಡ ಇವರ ಸಂಪರ್ಕದಲ್ಲಿ ಇದ್ದಾನೆ ಎಂಬ ಅಂಶ ತನಿಖೆ ವೇಳೆ ತಿಳಿದುಬಂದಿದೆ. ಜೈಲಿನಲ್ಲಿರುವ ಆರೋಪಿಯ ಸೂಚನೆಯಂತೆ ಆರೋಪಿಗಳು ಪೋರ್ಟಲ್ ಮೂಲಕ ಗಾಂಜಾ ಡೆಲಿವರಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು
ಶ್ರೀ ಶಿವಕುಮಾರ ಸ್ವಾಮೀಜಿ ಪ್ರತಿಮೆ ವಿರೂಪ, ʼಜೀಸಸ್ ಕನಸಲ್ಲಿ ಪ್ರಚೋದನೆ ನೀಡಿದ್ದಕ್ಕೆ ಕೃತ್ಯʼ ಎಂದ ಆರೋಪಿ
ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು (Shivakumara Swamiji bust damage) ಕಿಡಿಗೇಡಿಯೊಬ್ಬ ವಿರೂಪಗೊಳಿಸಿದ್ದು, “ಈ ಕೃತ್ಯ ಎಸಗಲು ಜೀಸಸ್ ತನಗೆ ಕನಸಲ್ಲಿ ಬಂದು ಪ್ರಚೋದನೆ ನೀಡಿದ್ದಾರೆ” ಎಂದು (Bengaluru crime news) ಹೇಳಿದ್ದಾನೆ.
ನವೆಂಬರ್ 30ರಂದು ಬೆಂಗಳೂರಿನಲ್ಲಿ ಈತ ಕೃತ್ಯ ಎಸಗಿದ್ದ. ಕೃತ್ಯಕ್ಕೆ ಸಂಬಂಧಿಸಿ ಈತನನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು, ಅದಕ್ಕೆ ಈತ ನೀಡಿದ ವಿವರಣೆ ಕೇಳಿ ಶಾಕ್ ಆಗಿದ್ದಾರೆ. 37 ವರ್ಷದ ಆರೋಪಿ ಶ್ರೀಕೃಷ್ಣ ಆಂಧ್ರಪ್ರದೇಶ ಮೂಲದವನು ಹಾಗೂ ಬೆಂಗಳೂರಿನಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿದ್ದಾನೆ.
ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದು, ತನ್ನ ಕನಸಿನಲ್ಲಿ ಯೇಸುಕ್ರಿಸ್ತ ಬಂದು ಪ್ರತಿಮೆಯನ್ನು ಧ್ವಂಸಗೊಳಿಸಲು ಪ್ರಚೋದಿಸಿರುವುದಾಗಿ ಹೇಳಿದ್ದಾನೆ. ಬೆಂಗಳೂರಿನ ವೀರಭದ್ರ ನಗರದಲ್ಲಿ ಬೆಳಗಿನ ಜಾವ 1:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರತಿಮೆಯ ಬಳಿಗೆ ಬಂದ ಶ್ರೀಕೃಷ್ಣ ಅದನ್ನು ಭಾಗಶಃ ವಿರೂಪಗೊಳಿಸಿದ್ದಾನೆ. ಬೆಳಿಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಮೆ ವಿರೂಪಗೊಂಡಿರುವುದನ್ನು ನೋಡಿ ಆಘಾತಗೊಂಡಿದ್ದಾರೆ.
ಸ್ಥಳೀಯರು ಈ ಕೃತ್ಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶ್ರೀಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಪರಾಧ ಎಸಗಿದ ಶ್ರೀಕೃಷ್ಣನ ಮಾನಸಿಕ ಆರೋಗ್ಯದ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಅವಿವಾಹಿತನಾದ ಶಿವಕೃಷ್ಣ, ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಆತನ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆತ ಕ್ರೈಸ್ತ ಧರ್ಮದ ಪ್ರಭಾವಕ್ಕೆ ಒಳಗಾಗಿ ಮೂರು ವರ್ಷಗಳಿಂದ ಆ ಧರ್ಮವನ್ನು ಪಾಲಿಸುತ್ತಿದ್ದ. ಹಿಂದೂ ಧರ್ಮದ ಸಂತರು, ಸನ್ಯಾಸಿಗಳನ್ನು ದ್ವೇಷಿಸುತ್ತಿದ್ದ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆತ ಕೆಲ ದಿನಗಳ ಹಿಂದೆ ಫುಡ್ ಡೆಲಿವರಿ ಮಾಡಲು ವೀರಭದ್ರನಗರಕ್ಕೆ ಹೋಗಿದ್ದಾಗ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ ಗಮನಿಸಿದ್ದ. ನ.30ರಂದು ತಡರಾತ್ರಿ ಅದೇ ಜಾಗಕ್ಕೆ ಬಂದು ಸುತ್ತಿಗೆಯಿಂದ ಪುತ್ಥಳಿ ವಿರೂಪಗೊಳಿಸಿ ಪರಾರಿಯಾಗಿದ್ದ ಎಂದು ಗಿರಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಿವಕೃಷ್ಣ, ತನ್ನ ಮನೆಯ ಬಳಿ ಹಾಕಲಾಗಿದ್ದ ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳನ್ನು ಹರಿದು ಹಾಕಿದ್ದ. ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿದ್ದ ಆತ ಭಿತ್ತಿಪತ್ರ ಹಂಚುತ್ತಿದ್ದ. ಭಿತ್ತಿಪತ್ರದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ನೇರವಾಗಿ ಬೈಬಲ್ ಸಿಗುವಂತೆ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.