Thursday, 19th December 2024

Chalavadi Narayanaswamy: ಸಂವಿಧಾನ ಜತೆಯಲ್ಲಿ ಇಟ್ಟುಕೊಂಡು ಓಡಾಡುವುದು ನಾಟಕವಲ್ಲದೇ ಇನ್ನೇನು?; ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

Chalavadi Narayanaswamy

ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್ (Dr BR Ambedkar) ಅವರನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ನೋಯಿಸಿ, ವಂಚಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದರು. ಬೆಳಗಾವಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಡಾ. ಅಂಬೇಡ್ಕರ್ ಅವರ ಹೇಳಿಕೆಗಳನ್ನು ವಿರೋಧಿಸಿದ್ದಲ್ಲದೆ ಖಂಡಿಸುತ್ತ ಬಂದಿದೆ. ಬಾಬಾ ಸಾಹೇಬರು ದಲಿತರಿಗೆ ಪ್ರತ್ಯೇಕ ಇಲೆಕ್ಟೊರೇಟ್ ಬೇಕೆಂದು ಬ್ರಿಟಿಷರನ್ನು ಕೇಳಿದಾಗ ಕಾಂಗ್ರೆಸ್ಸಿಗರು ಅದನ್ನು ವಿರೋಧಿಸಿದ್ದರು. ಚುನಾವಣೆಗಳಲ್ಲಿ ಅವರು ನಿಂತಾಗ ಕೂಡ ಅವರನ್ನು ನೆಹರೂ ಅವರು ಗುಂಪು ಕಟ್ಟಿಕೊಂಡು ಸೋಲಿಸಿದ್ದರು ಎಂದು ದೂರಿದರು.

ಅಂಥ ಮೇಧಾವಿ ವ್ಯಕ್ತಿ ಸಂವಿಧಾನ ಬರೆದ ಮೇಲೂ ಈ ದೇಶದಲ್ಲಿ ಅವರು ಬರೆದ ಸಂವಿಧಾನ ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇವತ್ತು ಸಂವಿಧಾನವನ್ನು ಜತೆಯಲ್ಲಿ ಇಟ್ಟುಕೊಂಡು ಓಡಾಡುವುದು ನಾಟಕವಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು.

ಮೊದಲಿನಿಂದ ರಾಹುಲ್ ಗಾಂಧಿ, ಇತರ ಕಾಂಗ್ರೆಸ್ಸಿಗರು ಸಂವಿಧಾನದ ಪ್ರತಿಯನ್ನು ಯಾಕೆ ಕೈಯಲ್ಲಿ ಹಿಡಿದಿಲ್ಲ? ಸಂವಿಧಾನ ಪ್ರದರ್ಶನ ಕೇವಲ ನಾಟಕ ಎಂದು ಅವರು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಡಿ.21ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ದಲಿತರನ್ನು ಸೆಳೆಯಲು, ಓಟ್ ಬ್ಯಾಂಕಿಗಾಗಿ ನೀವು ಅನುಸರಿಸುವ ಕ್ರಮ ಇದು ಎಂದು ಟೀಕಿಸಿದ ಅವರು, ಇದನ್ನೇ ಅಮಿತ್ ಶಾ ಅವರು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಅಮಿತ್ ಶಾ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಇದೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರ್‌ರ ವಿರೋಧಿ ಎಂದು ನಾನೂ ಹೇಳುವೆ. ಇದು ಬೇಕಿದ್ದರೆ ವೈರಲ್ ಆಗಲಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲೆಸೆದರು.