Thursday, 28th November 2024

CM Siddaramaiah: ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆಶಿ; ಸಂಪುಟ ಸರ್ಜರಿ ಖಚಿತ

Siddaramaiah Shivakumar

ಬೆಂಗಳೂರು: ಒಂದೆಡೆ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಜೊತೆಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೂಡ ದೆಹಲಿಗೆ ತೆರಳಲಿದ್ದು, ಹೈಕಮಾಂಡ್‌ ಭೇಟಿಯಾಗಲಿದ್ದಾರೆ. ಇವರಿಬ್ಬರ ದಿಲ್ಲಿ ಭೇಟಿಯ ಹಿಂದೆ ರಾಜ್ಯ ಸಂಪುಟಕ್ಕೆ (Karnataka Cabinet) ಸರ್ಜರಿ ಹಾಗೂ ಕೆಪಿಸಿಸಿ (KPCC) ಪುನಾರಚನೆಯ ಚಿಂತನೆ ಇದೆ ಎಂಬ ಸುದ್ದಿ ಓಡಾಡುತ್ತಿದೆ.

ಚನ್ನಪಟ್ಟಣ ಸೇರಿದಂತೆ ಮೂರು ಕಡೆಯ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ರಣೋತ್ಸಾಹದಲ್ಲಿದೆ. ಈ ನಡುವೆ ಆಪರೇಶನ್‌ ಹಸ್ತದ ಸುದ್ದಿ ಕೂಡ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ ನಾಯಕರು ನಿಗೂಢತೆ ಕಾಪಾಡಿಕೊಂಡಿದ್ದು, ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ ಸಂಪುಟ ಸರ್ಜರಿಯ ಕುತೂಹಲ ಮತ್ತಷ್ಟು ಗರಿಗೆದರಿದೆ.

ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಸಂಪುಟ ಸರ್ಜರಿ ಸುಳಿವು ಕೊಟ್ಟಿದ್ದರು. ದೆಹಲಿಯಲ್ಲೇ ಅವರು ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರ ಜತೆಗೆ ಆಪರೇಷನ್ ಹಸ್ತ, ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಈ ಹಿಂದೆಯೇ ಹೈಕಮಾಂಡ್ ರಾಜ್ಯ ಕೈ ನಾಯಕರ ಜತೆ ಸಂಪುಟ ಸರ್ಜರಿ ಬಗ್ಗೆ ಚರ್ಚೆ ಮಾಡಿದೆ. ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಶೀಘ್ರದಲ್ಲೇ ಅಧಿಕೃತ ಸೂಚನೆ ನೀಡಲಿದೆ. ಈಗಾಗಲೇ ಹೈಕಮಾಂಡ್ ನಾಯಕರು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದ್ದಾರೆ. 1 ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಸೂಚನೆ ಕೊಟ್ಟಿದೆ. ಆದರೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಸಿಎಂ ಸಮಯ ಕೋರಿದ್ದರು. ಹೀಗಾಗಿ ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಬಹುತೇಕ ಪಕ್ಕಾ ಎನ್ನಲಾಗಿದೆ. ಕೆಲ ಶಾಸಕರು ಈಗಾಗಲೇ ದೆಹಲಿ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದು, ದೆಹಲಿ ನಾಯಕರನ್ನು ಭೇಟಿಯಾಗಿ ಮಾತುಕತೆ ಮಾಡುತ್ತಿದ್ದಾರೆ.

ಸಚಿವ ಸಂಪುಟ ಪುನರ್ ರಚನೆ ವಿಚಾರವನ್ನು ಖುದ್ದು ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ದಿನೇಶ್ ಗುಂಡೂರಾವ್ 2 ವರ್ಷಕ್ಕೊಮ್ಮೆ ಪುನರ್ ರಚನೆ ಆದರೆ ಒಳ್ಳೆಯದದು ಎಂದಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಚರ್ಚೆ ಕೂಡ ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಕೈ ಕುರ್ಚಿಗಾಗಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಆಗುವುದು ಮುಳ್ಳಿನ ಮೇಲೆ ನಿಂತಂತೆ ಎಂದಿದ್ದಾರೆ.

ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಬುಧವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಇಂದು ಜಾರ್ಖಂಡ್ ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: CM Siddaramaiah: ಅರಣ್ಯವಾಸಿ ಬುಡಕಟ್ಟು ಜನರಿಗೆ ಮೂಲ ಸೌಕರ್ಯ ಕಲ್ಪಿಸಿ: ಸಿಎಂ ಸೂಚನೆ