Thursday, 28th November 2024

CM Siddaramaiah: ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಎಚ್‌ಡಿಕೆ, ಬಿಜೆಪಿ ಸಂಸದರು ಏಕೆ ಧ್ವನಿ ಎತ್ತುತ್ತಿಲ್ಲ: ಸಿಎಂ ಪ್ರಶ್ನೆ

CM Siddaramaiah

ಬೆಂಗಳೂರು: ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ತೆರಿಗೆಯಲ್ಲಿ ನಮಗೆ ಅನ್ಯಾಯ ಆಗಿದೆ. ಕೇಂದ್ರವು ರಾಜ್ಯಗಳಿಗೆ ಬಿಡುಗಡೆ ಮಾಡಿರುವ ತೆರಿಗೆ ಪಾಲಿನಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶಕ್ಕೆ ಬಹುಪಾಲು ಹೋಗಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಯಾಕೆ ಅನುಮತಿ ಕೊಡಿಸುತ್ತಿಲ್ಲ? ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿಯ ಸಂಸದರು ಏಕೆ ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆಯನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಳುತ್ಯಲೇ ಇದ್ದೇವೆ. ಮಹದಾಯಿಗೂ ಅನುಮತಿ ಕೇಳಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ಕೊಡದೆ ಅನ್ಯಾಯ ಮಾಡುತ್ತಿದೆ. ಎಚ್‌.ಡಿ. ಕುಮಾರಸ್ವಾಮಿ ಯಾಕೆ ಅನುಮತಿ ಕೊಡಿಸುತ್ತಿಲ್ಲ? ಕರ್ನಾಟಕ ರಾಜ್ಯಕ್ಕೆ ಏಕೆ ಮಲತಾಯಿ ಧೋರಣೆ ಎಂದು ಕೇಂದ್ರ ಸರ್ಕಾರವನ್ನು ಇವರ್ಯಾರೂ ಪ್ರಶ್ನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾಗಿದೆ. ನುಡಿದಂತೆ ನಡೆದದ್ದಕ್ಕೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಹಿಂದಿನ ಸರ್ಕಾರಗಳು ಅಗತ್ಯ ಹಣ ಬಿಡುಗಡೆ ಮಾಡದೆ ನಿರಾಸಕ್ತಿ ವಹಿಸಿದ್ದರಿಂದ ಯೋಜನೆ ನಿಧಾನವಾಯಿತು. ಮತ್ತೆ ನಾವು ಅಧಿಕಾರಕ್ಕೆ ಬಂದು ಯೋಜನೆ ಲೋಕಾರ್ಪಣೆಗೊಳಿಸಿ 110 ಹಳ್ಳಿಗಳಿಗೆ ನೀರನ್ನು ಒದಗಿಸಿದ್ದೇವೆ ಎಂದು ಹೇಳಿದ್ದಾರೆ.

ಆರನೇ ಹಂತದ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಸುಳ್ಳು ಹೇಳಿ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದು ಸುಳ್ಳು ಹೇಳದೆ ನುಡಿದಂತೆ ನಡೆದು ಜನರ ಕೆಲಸ ಮಾಡಿ ತೋರಿಸಿದ್ದೇವೆ.

ಪ್ರತಿ ವರ್ಷ 4 ಲಕ್ಷ ಕೋಟಿಗೂ ಅಧಿಕ ತೆರಿಗೆ ಕೇಂದ್ರಕ್ಕೆ ಕೊಡ್ತಾ ಇದ್ದೀವಿ. ಆದರೆ ವಾಪಸ್ ನಮಗೆ ಬರುತ್ತಿರುವುದು 60ಸಾವಿರ ಕೋಟಿ ಮಾತ್ರ. 100 ಪೈಸೆಗೆ 15 ಪೈಸೆ ಮಾತ್ರ ವಾಪಸ್ ಬರುತ್ತಿದೆ. ಇದು ಅನ್ಯಾಯ ಅಲ್ವಾ? ಏಕೆ ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಈ ವೇಗಕ್ಕೆ ತಕ್ಕಂತೆ ಮೂಲಭೂತ ಸವಲತ್ತು ಒದಗಿಸುವ ಸವಾಲನ್ನು ನಮ್ಮ ಸರ್ಕಾರ ಸ್ವೀಕರಿಸಿ ಯಶಸ್ವಿಯಾಗಿ ನಿಭಾಯಿಸುತ್ತೇವೆ. ಕಾವೇರಿ ಕುಡಿಯುವ ನೀರಿನ ಆರನೇ ಹಂತದ ಯೋಜನೆಯಿಂದ 500 MLD ಕುಡಿಯುವ ನೀರು ಬೆಂಗಳೂರಿಗರಿಗೆ ಸಿಗತ್ತೆ. ಇದನ್ನೂ ನಾವು ಘೋಷಿಸಿದ್ದೀವಿ. ನಾವು ಇದನ್ನೂ ಮಾಡಿ ತೋರಿಸ್ತೀವಿ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ಸಮರ್ಪಿಸಿದರು. ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ. ಲೋಕಾರ್ಪಣೆಗೊಳಿಸಿದ ನೆನಪಿಗಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಜತೆಗೂಡಿ ಘಟಕದ ಆವರಣದಲ್ಲಿ ಸಸಿ ನೆಟ್ಟರು.

ಈ ಸುದ್ದಿಯನ್ನೂ ಓದಿ | Cauvery Phase 5: ಮಹತ್ವಾಕಾಂಕ್ಷಿ ‘ಕಾವೇರಿ 5ನೇ ಹಂತದ ಯೋಜನೆ’ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಶಾಸಕರಾದ ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಶಾಸಕರಾದ ಎಸ್.ಆರ್. ವಿಶ್ವನಾಥ್ , ವಿಧಾನಸಭೆ, ವಿಧಾನಪರಿಷತ್ ಶಾಸಕರುಗಳಾದ ಟಿ.ಎಂ.ನಾಗರಾಜು, ರವಿ, ದಿನೇಶ್ ಗೂಳಿಗೌಡ, ಸುದಾಮ್ ದಾಸ್, ಮಾದೇಗೌಡರು, ನಾಗರಾಜ್ ಯಾದವ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.