Tuesday, 22nd October 2024

CM Siddaramaiah: ಕರ್ನಾಟಕ ಕನ್ನಡಮಯವಾಗಬೇಕು: ಸಿಎಂ ಸಿದ್ದರಾಮಯ್ಯ

CM Siddaramaiah

ರಾಯಚೂರು: ಕರ್ನಾಟಕ (Karnataka) ಸಂಪೂರ್ಣ ಕನ್ನಡಮಯವಾಗಲಿ. ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಕನ್ನಡ ಸಂಭ್ರಮ 50 ರ ಅಂಗವಾಗಿ ಆಯೋಜಿಸಿದ್ದ ಗೋಕಾಕ್ ಚಳವಳಿ: ಹಿನ್ನೋಟ-ಮುನ್ನೋಟ” ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ. ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ ಎಂದು ಸಿಎಂ ಕರೆ ನೀಡಿದರು.

ಗೋಕಾಕ್ ಚಳವಳಿಯ ಪರಿಣಾಮ ರಾಜ್ಯದಲ್ಲಿ ಕನ್ನಡದ ವಾತಾವರಣ ವಿಸ್ತರಿಸಲು ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ಬಳಿಕ ಇದೇ ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯಿತು ಎಂದು ತಿಳಿಸಿದ ಅವರು, ಪ್ರತಿಯೊಂದು ಭಾಷೆಯನ್ನೂ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ ಎಂದರು.

ಈ ಸುದ್ದಿಯನ್ನೂ ಓದಿ | Vadderse Raghurama Shetty: ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳಿಗೆ ಆಹ್ವಾನ

ಕನ್ನಡ ನೆಲದಲ್ಲಿ ನಡೆದ ಕನ್ನಡ ಭಾಷಾ ಚಳವಳಿ ಅತ್ಯಂತ ಚಾರಿತ್ರಿಕವಾದದ್ದು. ನಾನು ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ಇಂಗ್ಲಿಷ್ ಟೈಪ್‌ ರೈಟರ್‌ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ ಗಳನ್ನು ಕೊಡ್ತಿದ್ದೆ ಎಂದು ತಮ್ಮ ಅವಧಿಯ ಕನ್ನಡ ಕಟ್ಟುವ ಕೆಲಸವನ್ನು ಸಿಎಂ ಸ್ಮರಿಸಿದರು.

ಎಲ್ಲಾ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ದಾರಾಳತನ ಬೇಡ ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಕನ್ನಡ ಚಳವಳಿಗಾರರನ್ನು, ಗೋಕಾಕ್ ಹೋರಾಟಗಾರರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.

ಈ ಸುದ್ದಿಯನ್ನೂ ಓದಿ | Book Release: ‘ಮುಖಪುಸ್ತಕದ ಮರೆಯದ ಮುಖಗಳು’ ಕೃತಿ ಬಿಡುಗಡೆ ಇಂದು

ಈ ಸಂದರ್ಭದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಎಚ್.ಸಿ. ಮಹದೇವಪ್ಪ, ಶರಣ ಪ್ರಕಾಶ್ ಪಾಟೀಲ್, ಬೋಸರಾಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸೇರಿ ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರು, ಕನ್ನಡ ಚಳವಳಿಗಾರರು, ಹೋರಾಟಗಾರರು, ಕನ್ನಡದ ಕಾರ್ಯಕರ್ತರು ಉಪಸ್ಥಿತರಿದ್ದರು.‌