ಬೆಂಗಳೂರು: ”ಎಲ್ಲ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ತಿದ್ದಿಕೊಳ್ಳುತ್ತೇನೆ. ಆದರೆ ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ ಟೀಕಿಸಿದರೆ ಐ ಡೋಂಟ್ ಕೇರ್” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಖಡಕ್ ಆಗಿ ನುಡಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು (Press club of Bangalore) ಕೊಡಮಾಡುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ʼʼನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಬೇರೆ ಹೆಸರಲ್ಲಿ ಅವರು ಘೋಷಿಸಿದ್ದಾರೆ. ಆದರೂ ಮಹಾರಾಷ್ಟ್ರ ಚುನಾವಣೆ ವೇಳೆ ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿಯೇ ಆಗಿಲ್ಲ ಎಂದು ಸುಳ್ಳು ಜಾಹಿರಾತು ನೀಡಿದರುʼʼ ಎಂದು ಸಿಎಂ ವ್ಯಂಗ್ಯವಾಡಿದರು.
ʼʼಇತ್ತೀಚೆಗೆ ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿದೆ. ಇದು ಅಪಾಯಕಾರಿ. ನಾನು ಇವತ್ತಿನವರೆಗೂ ಯಾವ ಮಾಧ್ಯಮದವರಿಗೂ ಯಾಕೆ ಹೀಗೆ ಬರಿದ್ರಿ ಅಂತ ಕೇಳಿಲ್ಲ. ಆದರೆ ನೀವು ಜನರ ಧ್ವನಿಯಾಗಿ ಕೆಲಸ ಮಡಬೇಕು. ಸಾಧ್ಯವಾದರೆ ಸತ್ಯ ಬರೆಯೋಕೆ ಪ್ರಯತ್ನಿಸಿ ನೋಡೋಣʼʼ ಎಂದು ತಿಳಿಸಿದರು.
ʼʼಮನಃಸಾಕ್ಷಿಗೆ ತಕ್ಕಂತೆ ಮಾಧ್ಯಮಗಳು ವರದಿ ಮಾಡಿದರೆ ಸಮಾಜಕ್ಕೆ ಅದಕ್ಕಿಂತ ದೊಡ್ಡ ಸೇವೆ ಇಲ್ಲ. ಸುದ್ದಿಗಳನ್ನು ವೈಭವೀಕರಿಸುವುದು, ಮೂಢ ನಂಬಿಕೆಗಳನ್ನು ಬೆಂಬಲಿಸಲು ಹೋಗಬೇಡಿ. ನನ್ನ ಕಾರು ಮೇಲೆ ಕಾಗೆ ಕುಳಿತಿದ್ದಕ್ಕೆ ಜ್ಯೋತಿಷಿಗಳನ್ನು ಚಾನಲ್ಗಳಿಗೆ ಕರೆಸಿ ಏನೆಲ್ಲಾ ಹೇಳಿಸಿದಿರಿ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲ್ಲ ಎಂದು ತೋರಿಸಿದಿರಿ. ಆದರೆ ನಾನು 5 ವರ್ಷ ಪೂರೈಸಿ 2ನೇ ಬಾರಿ ಸಿಎಂ ಆದೆ. ಈಗ ಹೇಳಿ ಕಾಗೆ ಸುದ್ದಿಯಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆ ಆಯ್ತೋ ಇಲ್ವೋ?” ಎಂದು ಪ್ರಶ್ನಿಸಿದರು.
ಜವಾಬ್ದಾರಿ ನಿಭಾಯಿಸಿ
”ನಾವು ಜನಪರ ಕೆಲಸ ಮಾಡದಿದ್ದಾಗ, ಕೊಟ್ಟ ಮಾತು ಈಡೇರಿಸದಿದ್ದಾಗ ಅದನ್ನು ಬರೆದು ಜನರ ಕಣ್ಣು ತೆರೆಸುವ ಹಕ್ಕು ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಅದನ್ನು ನಿಭಾಯಿಸಿ. ನಾವು ಊಟಕ್ಕೆ ಸೇರಿ ಏನೋ ಮಾತಾಡಿರ್ತೀವಿ. ಆದರೆ ಮಾಧ್ಯಮಗಳೇ ಡೈಲಾಗ್ ಬರೆದು ಬಿಡ್ತಾರೆ. ನಮಗೆ ಗೊತ್ತೇ ಇರದ ವಿಷಯವನ್ನು ಅವರೇ ಡೈಲಾಗ್ ಬರೆದು ತೋರಿಸಿದ್ದಾರೆʼʼ ಎಂದು ಟೀಕಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಹೇಳಿದ ಸಮ ಸಮಾಜದ ಆಶಯ ಈಡೇರಿಸುವ ದಿಕ್ಕಿನಲ್ಲಿ ವೃತ್ತಿಪರತೆ ಮೆರೆದರೆ ಅದು ಉಪಯೋಗವಾಗುತ್ತದೆ. ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಜನಮುಖಿಯಾಗಿ ಕರ್ತವ್ಯ ನಿರ್ವಹಿಸಿʼʼ ಎಂದು ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು.
ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತರಾದ ಸಚಿವ ಎಂ.ಬಿ.ಪಾಟೀಲ್, ಸನ್ಮಾನಿತರಾದ ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ.ಜಾರ್ಜ್, ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ: CM Siddaramaiah: ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು: ಸಿಎಂ ಸಿದ್ದರಾಮಯ್ಯ