Tuesday, 7th January 2025

CM Siddaramaiah: ಮೃತ ಐವರು ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ; ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

CM Siddaramaiah

ಸಂಡೂರು: ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರಿಗೆ ಸರ್ಕಾರ ನೀಡುವ ಪರಿಹಾರದ ಮೊತ್ತವನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದರು. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರು ಅವರು ಹೇಳಿದ ಸುಳ್ಳಿಗೆ ಪ್ರತಿಯಾಗಿ ನಾನು ಹಾಕಿದ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು. ʼʼಉಪಚುನಾವಣೆಯಲ್ಲಿ ಬಿಜೆಪಿಯ ಸ್ಥಳೀಯ ನಾಯಕರು, ಪ್ರಧಾನಿ ಮೋದಿ ಸರಣಿ ಸುಳ್ಳುಗಳನ್ನು ಹೇಳಿದರು. ನೀವು ಆರೋಪ ಸಾಬೀತಿಪಡಿಸಿ, ನಾನು ರಾಜಕೀಯ ನಿವೃತ್ತಿ ತಗೊತೀನಿ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ. ಅವರು ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲʼʼ ಎಂದರು.

ʼʼನಾನು 3 ದಿನ ಸಂಡೂರಿನಲ್ಲಿ ಪ್ರಚಾರ ಮಾಡಿದೆ. ಈ ವೇಳೆ ತುಕಾರಾಮ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ್ದೇನೆ. ತುಕಾರಾಮ್ ಅವರಿಗೂ ಮೊದಲು ಸಂಡೂರು ಹೇಗಿತ್ತು ಎನ್ನುವುದೂ ನನಗೂ ಗೊತ್ತು. ಈಗ ತುಕಾರಾಮ್ ಅವರು ಒಳ್ಳೆ ಕೆಲಸಗಳನ್ನು ಮಾಡಿರುವುದನ್ನು ನಾನು ನೋಡಿದ್ದೇನೆ” ಎಂದು ಹೇಳಿದರು.

ನುಡಿದಂತೆ ನಡೆವ ಸರ್ಕಾರ

ʼʼನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನಾಡಿನ ಜನತೆ ಎದುರಿಗೆ ಕೊಟ್ಟ ಎಲ್ಲ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ನಮ್ಮ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡುವುದರ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆʼʼ ಎಂದಿ ಸಿದ್ದರಾಮಯ್ಯ ತಿಳಿಸಿದರು.

ʼʼ2014-2018ರಲ್ಲಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಗಳನ್ನು ನೆನಪಿಸಿಕೊಳ್ಳಿ. ಅವುಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ನೋಡಿ. ಮೋದಿಯವರು ನಿಮಗೆ ಈ ಮಟ್ಟದ ಮೋಸ ಮಾಡಿದ್ದಾರಲ್ಲಾ ಇದನ್ನು ಪ್ರಶ್ನಿಸಬೇಕಿದೆ. ಮೋದಿ ಅಚ್ಚೆ ದಿನ್ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ವಿದೇಶದಿಂದ ಕಪ್ಪು ಹಣ ತರಲಿಲ್ಲ, ನಿಮ್ಮ ಖಾತೆಗೆ 15 ಲಕ್ಷ ರೂ. ಹಾಕಲಿಲ್ಲ. ಬರೀ ಭಾಷಣದಲ್ಲೇ ಮೋದಿಯವರು ಎಲ್ಲ ಮುಗಿಸಿ ಹೋದರುʼʼ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಿಪಬ್ಲಿಕ್ ಬಳ್ಳಾರಿ ಮಾಡಿದ ರೆಡ್ಡಿ

ʼʼಬಳ್ಳಾರಿ ಜಿಲ್ಲೆಯ ಜನತೆಯನ್ನು ಭಯದಲ್ಲಿಟ್ಟು ರಿಪಬ್ಲಿಕ್ ಬಳ್ಳಾರಿ ಮಾಡಿದ್ದ ಜನಾರ್ದನರೆಡ್ಡಿಯವರಿಗೆ ಬಿಜೆಪಿ ಈ ಚುನಾವಣೆಯ ಉಸ್ತುವಾರಿ ವಹಿಸಿತ್ತು. ಆದರೆ ಸಂಡೂರಿನ ಜನತೆ ರೆಡ್ಡಿಯವರ ಹಣಕ್ಕೆ, ಭಯಕ್ಕೆ, ಆಮಿಷಕ್ಕೆ, ಸುಳ್ಳುಗಳಿಗೆ, ಅಪಪ್ರಚಾರಕ್ಕೆ ಸೋಲಲಿಲ್ಲ. ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣ ಮತ್ತು ಸತ್ಯದ ರಾಜಕಾರಣವನ್ನು ಗೆಲ್ಲಿಸಿದ್ದೀರಿ. ಇದು ಸಂಡೂರಿನ ಘನತೆಯನ್ನು ಹೆಚ್ಚಿಸಿದೆʼʼ ಎಂದು ಸಿಎಂ ಹೇಳಿದರು.

ʼʼಇವತ್ತಿನವರೆಗೂ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ. ಕೇವಲ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಆಪರೇಷನ್ ಕಮಲಕ್ಕೆ ಬಳಸಿದ ಹಣ ಕೂಡ ಕಪ್ಪು ಹಣ ಅಲ್ಲವೇʼʼ ಎಂದು ಪ್ರಶ್ನಿಸಿದರು.

ನಿಮ್ಮ ಆಶೀರ್ವಾದ ಇರುವವರೆಗೂ ಬಗ್ಗಲ್ಲ-ಜಗ್ಗಲ್ಲ

ʼʼ3 ಉಪ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ದೊಡ್ಡ ಆಶೀರ್ವಾದ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಕೇಸು, ಸುಳ್ಳು ಆರೋಪಗಳ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ಈ ಸಿದ್ದರಾಮಯ್ಯ ಯಾವುದೇ ಷಡ್ಯಂತ್ರ, ಸುಳ್ಳು ಕೇಸುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ” ಎಂದು ಪುನರುಚ್ಚರಿಸಿದರು.

ನಾಚಿಕೆ ಇಲ್ಲದೆ ಸುಳ್ಳು ಹೇಳ್ತಾರೆ

”ವಕ್ಫ್ ವಿಚಾರದಲ್ಲೂ ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಲೋಕಲ್ ಲೀಡರ್ ಗಳ ವರೆಗೂ ಎಲ್ಲರೂ ಸರಣಿ ಸುಳ್ಳು ಅಪಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ ಚುನಾವಣೆಯಲ್ಲಿ 700 ಕೋಟಿ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡಿದರು. ನಾನು ಪ್ರಧಾನಿಗೆ ಸವಾಲು ಹಾಕಿದೆ, ನಿಮ್ಮ ಆರೋಪ ಸಾಬೀತು ಮಾಡಿ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎನ್ನುವ ನನ್ನ ಸವಾಲು ಸ್ವೀಕರಿಸಲು ಪ್ರಧಾನಿ ಮೋದಿ ಧೈರ್ಯ ಮಾಡಲಿಲ್ಲ. ಅವರಿಗೆ ಸುಳ್ಳು ಹೇಳುವುದಕ್ಕೆ ಮಾತ್ರ ಧೈರ್ಯ ಬರುತ್ತದೆ” ಎಂದು ವ್ಯಂಗ್ಯವಾಡಿದರು.

ಸಂಡೂರಿಗೆ ಹೆಚ್ಚುವರಿ 2 ಸಾವಿರ ಮನೆ

ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಂಡೂರು ಜನತೆಯನ್ನು ಅಭಿನಂದಿಸಿ ಭಾಷಣ ಮಾಡುವ ವೇಳೆ ಸಂಡೂರು ಕ್ಷೇತ್ರಕ್ಕೆ ವಸತಿ ಇಲಾಖೆಯಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡುವುದಾಗಿ ಘೋಷಿಸಿದರು. ʼʼಈಗಾಗಲೇ 2,172 ಮನೆಗಳನ್ನು ನೀಡಲಾಗಿದೆ‌. ಸಂಡೂರಿನಲ್ಲಿ ಬಡವರು ಹೆಚ್ಚಾಗಿರುವುದರಿಂದ ಮತ್ತು ನಂಜುಂಡಪ್ಪ ಅವರ ವರದಿಯಲ್ಲಿ ಹಿಂದುಳಿದ ತಾಲ್ಲೂಕಿನ ಪಟ್ಟಿಯಲ್ಲಿ ಇರುವುದರಿಂದ ಹೆಚ್ಚುವರಿಯಾಗಿ 2,000 ಮನೆಗಳನ್ನು ನೀಡಲಾಗುವುದುʼʼ ಎಂದರು.‌

ಈ ಸುದ್ದಿಯನ್ನೂ ಓದಿ: Cult Movie: ದೂರು ಹಿಂಪಡೆದ ಡ್ರೋನ್‌ ತಂತ್ರಜ್ಞ, ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾ ಶೂಟಿಂಗ್‌ ನಿರಾತಂಕ