ಬೆಂಗಳೂರು: ಮುಡಾದಿಂದ (MUDA Case) ಪಡೆದ 14 ನಿವೇಶನಗಳನ್ನು ಹಿಂದಿರುಗಿಸಿದ ತಮ್ಮ ಪತ್ನಿಯ ದಿಡೀರ್ ನಿರ್ಧಾರ ತಮಗೆ ಆಶ್ಚರ್ಯ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮುಡಾ ಹಗರಣದಲ್ಲಿ (MUDA scam) ಮುಖ್ಯಮಂತ್ರಿ ಸಿದ್ದರಾಮಯ್ಯ ((CM Siddaramaiah) ಅವರಿಗೆ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಅವರ ಪತ್ನಿ ಬಿ.ಎಂ. ಪಾರ್ವತಿ 14 ಸೈಟ್ ಗಳನ್ನು ಹಿಂತಿರುಗಿಸಲು ನಿನ್ನೆ ಮುಂದಾಗಿದ್ದರು. ಮೈಸೂರಿನ ವಿಜಯನಗರದ ಮೂರು ಮತ್ತು ನಾಲ್ಕನೇ ಹಂತದಲ್ಲಿ ಪಡೆದ 14 ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಡಾ ಆಯುಕ್ತರಿಗೆ ಪಾರ್ವತಿ ಅವರು ಪತ್ರ ಬರೆದಿದ್ದರು.
ಈ ಕುರಿತಾಗಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪತ್ನಿ ನಿರ್ಧಾರಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ. ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ.
— Siddaramaiah (@siddaramaiah) September 30, 2024
ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ.
ಈ… pic.twitter.com/tk0C69rL3w
ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Muda Case: ಮುಡಾ ಪ್ರಕರಣದಲ್ಲಿ ಇಡಿ ಎಂಟ್ರಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲು