Thursday, 26th December 2024

CM Siddaramaiah: ಚರ್ಚೆಗೆ ಕರೆದರೂ ಅವರು ಬರಲಿಲ್ಲ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಿಎಂ ಪ್ರತಿಕ್ರಿಯೆ

ಬೆಳಗಾವಿ: ಬೆಳಗಾವಿಯ(Belagavi) ಸುವರ್ಣ ಸೌಧದಲ್ಲಿ(Suvarna Soudha) ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇನ್ನೊಂದೆಡೆ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ (Panchamasali Reservation Protest) ಹೋರಾಟ ಕೂಡ ಮುಗಿಲು ಮುಟ್ಟಿದೆ. ಈ ಕುರಿತು ಇಂದು(ಡಿ.10) ಸಿಎಂ ಸಿದ್ದರಾಮಯ್ಯ (CM Siddaramaiah) ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

“ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಸಂಬಂಧ ಸಮುದಾಯದ ಹಲವು ಮುಖಂಡರನ್ನು ಚರ್ಚೆಗೆ ಕರೆಯಲಾಗಿತ್ತು. ಚರ್ಚೆಗೆ ಒಬ್ಬರೂ ಬರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟ ಕೈಗೊಳ್ಳಲು ಖಂಡಿತ ಅವಕಾಶವಿದೆ. ಶಾಂತಿಯುತ ಹೋರಾಟಕ್ಕೆ ನಮ್ಮ ಯಾವುದೇ ವಿರೋಧವಿಲ್ಲ” ಎಂದು ಪಂಚಮಸಾಲಿ ಹೋರಾಟದ ಕುರಿತು ಇಂದು ಮಾಧ್ಯಮದವರಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಹೇಳಿಕೆಗೆ ಸಿಎಂ ಖಡಕ್ಕಾಗಿ ಉತ್ತರಿಸಿದ್ದಾರೆ. “ಬೆಳಗಾವಿ ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಬೇಕು ಎನ್ನುವ ವಿಚಾರವೇ ಅಪ್ರಸ್ತುತ. ಬೆಳಗಾವಿಯ ಕುರಿತು ಮಹಾಜನ್ ಆಯೋಗದ ವರದಿಯೇ ಅಂತಿಮವಾಗಿದ್ದು, ಪದೇ ಪದೇ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವುದು ಅವರ ಮೂರ್ಖತನ. ಈ ಬಗ್ಗೆ ನೀಡಲಾಗುತ್ತಿರುವ ಬಾಲಿಶವಾದ ಹೇಳಿಕೆಗಳನ್ನು ಕರ್ನಾಟಕ ಸರ್ಕಾರ ಸಹಿಸುವುದಿಲ್ಲ” ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಸಿದ್ದರಾಮಯ್ಯ “ಎಸ್.ಎಂ. ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದ್ದು, ಮೂರು ದಿನ ಶೋಕಾಚರಣೆ ಇರಲಿದೆ. ನಾಳೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ. ಎರಡು ತಿಂಗಳ ಹಿಂದೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಭೇಟಿಯಾಗಿ ಮಾತನಾಡಿದ್ದೆ” ಎಂದರು.

ಇಂದು (ಡಿ.10) ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪೊಲೀಸರು ಲಾಠಿಚಾರ್ಜ್ (Lathi Charge) ಆರಂಭಿಸಿದ್ದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಪ್ರತಿಪಕ್ಷಗಳಿಗೆ ಉತ್ತರಿಸಿದ ಸಿದ್ದರಾಮಯ್ಯ

ಸದನದಲ್ಲಿ ಶಾಸಕ ಯತ್ನಾಳ್ ಪಂಚಮಸಾಲಿ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದ್ದು,​ ಈ ವಿಚಾರವಾಗಿ ಹಿಂದಿನ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡೆವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನದ ಮುಂದೆ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ಪತ್ರಿಪಕ್ಷಗಳ ಸಾಲುಸಾಲು ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ. ವೀರಶೈವ ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿಗಳನ್ನು 2ಎ ಸೇರಿಸಲು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಟಗಾರರಿಗೆ ತಿಳಿಸಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:ಪಂಚಮಸಾಲಿ ಮೀಸಲಿಗೆ ಪಂಚತಂತ್ರ