ನವದೆಹಲಿ: ಸಣ್ಣ ಮತ್ತು ಅತಿಸಣ್ಣ ರೈತರಿಗೆ (Small Farmers) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಿಹಿ ಸುದ್ದಿ ನೀಡಿದೆ. ರೈತರಿಗೆ ನೀಡಲಾಗುವ ಅಡಮಾನ (ಮೇಲಾಧಾರ) ರಹಿತ ಸಾಲದ (collateral free loan) ಮಿತಿಯನ್ನು 1.66 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ (Agriculture loan) ಹೆಚ್ಚಿಸಿದೆ.
ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಪೂರ್ಣಗೊಂಡ ನಂತರ ಮಾತನಾಡಿದ ಗವರ್ನರ್ ಶಕ್ತಿಕಾಂತ ದಾಸ್, “ಕೃಷಿ ಒಳಸುರಿಗಳ ವೆಚ್ಚ ಹೆಚ್ಚಳ ಮತ್ತು ಒಟ್ಟಾರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು, ಮೇಲಾಧಾರ ರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮತ್ತಷ್ಟು ಸಾಲದ ಲಭ್ಯತೆಯನ್ನು ಒದಗಿಸುತ್ತದೆ” ಎಂದಿದ್ದಾರೆ.
ಅಡಮಾನ ರಹಿತ ಸಾಲದ ಹೆಚ್ಚಳವನ್ನು ಸೂಚಿಸಲು ಆರ್‌ಬಿಐ ಶೀಘ್ರದಲ್ಲೇ ಪ್ರತ್ಯೇಕ ಸುತ್ತೋಲೆ ಹೊರಡಿಸಲಿದೆ. ಮೇಲಾಧಾರ ರಹಿತ ವ್ಯವಹಾರ ಸಾಲ ಎಂದರೆ, ಅಲ್ಲಿ ರೈತರು ಸಾಲಗಳನ್ನು ಪಡೆಯಲು ಯಾವುದೇ ಆಸ್ತಿಯನ್ನು ಭದ್ರತೆಯಾಗಿ ಅಡವಿಡುವ ಅಗತ್ಯವಿಲ್ಲ.
ಮೇಲಾಧಾರ ರಹಿತ ಕೃಷಿ ಸಾಲಗಳ ಮಿತಿಯನ್ನು ಕೇಂದ್ರ ಬ್ಯಾಂಕ್ 2019ರಲ್ಲಿ ಪರಿಷ್ಕರಿಸಿತು. ಆಗ ಅದನ್ನು 1 ಲಕ್ಷ ರೂ.ಗಳಿಂದ 1.6 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಸಣ್ಣ ಮತ್ತು ಅತಿಸಣ್ಣ ರೈತರ ಆರ್ಥಿಕ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸೇವೆಗಳ ಇಲಾಖೆ 2019ರ ಫೆಬ್ರವರಿಯಲ್ಲಿ 3 ಲಕ್ಷ ರೂ.ವರೆಗಿನ ಕೆಸಿಸಿ / ಬೆಳೆ ಸಾಲಗಳಿಗೆ ಸಂಸ್ಕರಣೆ, ದಾಖಲಾತಿ, ತಪಾಸಣೆ ಮತ್ತು ಲೆಡ್ಜರ್ ಫೋಲಿಯೊ ಶುಲ್ಕಗಳು ಮತ್ತು ಇತರ ಎಲ್ಲಾ ಸೇವಾ ಶುಲ್ಕಗಳನ್ನು ಮನ್ನಾ ಮಾಡಿದೆ.
ಇದನ್ನೂ ಓದಿ: Home loan: ಮಹಿಳೆಯರಿಗೆ ಮಾತ್ರ ಸಿಗೋ ಗೃಹ ಸಾಲ ಲಾಭಗಳ ಲಿಸ್ಟ್!