Saturday, 23rd November 2024

ಬಸ್ ಓಡಾಟ ಇಲ್ಲದೆ ಪ್ರಯಾಣಿಕರ ಪರದಾಟ

ಹುಳಿಯಾರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಮುಷ್ಕರ ನಡೆಸಿದ ಪರಿಣಾಮವಾಗಿ ಹುಳಿಯಾರಿನಲ್ಲಿ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಅಕ್ಷರಶಃ ಪರದಾಡಿದರು.

ಹುಳಿಯಾರು ಪಟ್ಟಣವು ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳ ಗಡಿ ಗ್ರಾಮಗಳು ಅವಲಂಬಿತ ಪ್ರಮುಖ ವ್ಯಾಪಾರ ಕೇಂದ್ರ. ಅಲ್ಲದೆ ತಿಪಟೂರು, ಹಿರಿಯೂರು, ಶಿರಾ, ತುರುವೇಕೆರೆ, ಕಡೂರು ಸೇರಿದಂತೆ ಅನೇಕ ತಾಲೂಕು ಕೇಂದ್ರಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆಯುಳ್ಳ ಪಟ್ಟಣ. ಹಾಗಾಗಿ ನಿತ್ಯ ಸಹಸ್ರಾರು ಜನರು ಹುಳಿಯಾರಿಗೆ ಬಂದೋಗುತ್ತಾರೆ.

ಆದರೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೇವೆ ಇಲ್ಲದೆ ಕಳೆದ 3 ದಿನಗಳಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಇನ್ನು ಕೊವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸೇವೆ ಇನ್ನೂ ಪರಿಪೂರ್ಣವಾಗಿ ಆರಂಭವಾಗದೆ ಖಾಸಗಿ ಬಸ್‌ಗಳ ಓಡಾಟವೂ ವಿರಳವಾಗಿದೆ. ಪರಿಣಾಮ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಗಂಟೆಗಟ್ಟಲೆ ಕಾದರೂ ಬಸ್‌ಗಳು ಬಾರದೆ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಹೆಚ್ಚಿನ ತೊಂದರೆ ಅನುಭವಿಸಿದರು.

ದೂರದ ಗ್ರಾಮಗಳಿಗೆ ಆಟೋ ಬಾಡಿಗೆ ಕೊಡಲಾಗದೆ, ನಡೆಯಲು ಸಾಧ್ಯವಾಗದೆ ಪರಿತಪಿಸಿದ ಪ್ರಯಾಣಿಕರು, ಹತ್ತಿರದ ಗ್ರಾಮ ಗಳತ್ತ ಕಾಲ್ನಡಿಗೆಯಲ್ಲೇ ಹೊರಟರು. ದೂರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರು, ಬೆರಳೆಣಿಕೆಯಷ್ಟು ಖಾಸಗಿ ಬಸ್‌ಗಳು ಹಾಗೂ ಸರಕು ಸಾಗಣೆ ಟೆಂಪೋಗಳನ್ನು ಅವಲಂಬಿಸಬೇಕಾಯಿತು.

ಈ ಅವಕಾಶವನ್ನು ಬಳಸಿಕೊಂಡ ಕೆಲವರು ಕೊರೊನಾ ಹರಡುವಿಕೆ ಬಗ್ಗೆ ಚಿಂತಿಸದೆ, ಪ್ರಯಾಣಿಕರನ್ನು ಕುರಿಗಳಂತೆ ಖಾಸಗಿ ಬಸ್‌ಗಳಲ್ಲಿ, ಸರಕು ಸಾಗಾಣೆ ಟೆಂಪೋಗಳಲ್ಲಿ, ಆಟೋಗಳಲ್ಲಿ ತುಂಬಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಪ್ರಯಾಣಿ ಕರೂ ಸಹ ಕೊರೊನಾ ಬಗ್ಗೆ ಚಿಂತಿಸದೆ ತಮ್ಮ ಸ್ಥಳ ಸೇರಿಕೊಳ್ಳುವ ಧಾವಂತದಲ್ಲಿದ್ದರು.

ಸಾರಿಗೆ ನೌಕರರ ಮುಷ್ಕರ:ರಸ್ತೆಗಿಳಿದ ಖಾಸಗಿ ಬಸ್
ಕರೋನಾ ಲಾಕ್ಡೌನ್ ಅವಧಿಯಲ್ಲಿ ಸ್ಥಗಿತವಾಗಿದ್ದ ಖಾಸಗಿ ಬಸ್ ಸಂಚಾರ ಇದೀಗ ಸಾರಿಗೆ ನೌಕರರ ಮುಷ್ಕರದ ದೆಸೆಯಿಂದಾಗಿ ಪುನಹ ರಸ್ತೆಗಿಳಿದಿದೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಶುಕ್ರವಾರದಿಂದ ಸಾರಿಗೆ ನೌಕರರು ಮುಷ್ಕರ ಆರಂಭಸಿದ ಪರಿಣಾಮ ಸಂಚಾರ ವ್ಯವಸ್ಥೆ ಸ್ತಬ್ಧಗೊಂಡಿತ್ತು. ಈ ಅವಕಾಶ ಬಳಸಿಕೊಂಡು ಖಾಸಗಿ ಬಸ್‌ಗಳು ರಸ್ತೆ ಗಿಳಿದವು. ಕಳೆದ ಐದಾರು ತಿಂಗಳಿನಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದ ಖಾಸಗಿ ಬಸ್ಗಳ ಓಡಾಟ ದಿಂದ ಸಾರ್ವಜನಿಕರಿಗೆ ಇದೀಗ ಸ್ವಲ್ಪಮಟ್ಟಿನ ಅನುಕೂಲವಾಗಲಿದೆ.