Wednesday, 25th December 2024

Computer Literacy Test: ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಗಡುವು ಮತ್ತೆ ವಿಸ್ತರಣೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ (State Government Employees) ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ(Computer Literacy Test) ಉತ್ತೀರ್ಣರಾಗಲು ವಿಧಿಸಿದ್ದ ಗಡುವನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಿರಲೇಬೇಕೆಂದು ರಾಜ್ಯ ಸರ್ಕಾರವು 2024ರ ಡಿ.31ರವರೆಗೆ ಗಡುವು ನೀಡಿತ್ತು. ಆದರೆ, ಇನ್ನೂ ಸಾಕಷ್ಟು ನೌಕರರು ಪರೀಕ್ಷೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆ ಅವಧಿಯನ್ನು 2025ರ ಡಿಸೆಂಬರ್‌ 31ರವರೆಗೂ ವಿಸ್ತರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮುಂದಾಗಿದೆ.

ಈ ಸಂಬಂಧ ಇ-ಆಡಳಿತ(E-Administration) ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಹಾಗೂ ನಿಗಮ- ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ಕರ್ನಾಟಕ ಸರ್ಕಾರವು 2024ರ ಡಿ.31 ರವರೆಗೆ ಸಮಯಾವಕಾಶ ವಿಸ್ತರಿಸಿ ಅಧಿಸೂಚನೆ ಹೊರಡಿಸಿತ್ತು.

ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ. ಆದ್ದರಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇರುವ/ ಪರೀಕ್ಷೆ ತೆಗೆದುಕೊಳ್ಳದೆ ಇರುವ ಸರ್ಕಾರಿ ನೌಕರರು ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಲು ಸೂಚಿಸಲಾಗಿದೆ.

ಆದರೆ, 2024ರ ಜನವರಿಯಿಂದ ಈವರೆಗೆ ಕಿಯೋನಿಕ್ಸ್ ಸಂಸ್ಥೆಯಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಿರುವುದಿಲ್ಲ ಎಂದು ತಿಳಿದು ಬಂದಿದೆ. ಸರಿ ಸುಮಾರು 1.40 ಲಕ್ಷಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರುಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿದೆ.

ಹಾಗಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 2025ರ ಡಿ.31ರವರೆಗೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲು ಇ-ಆಡಳಿತದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಕೋರಿದ್ದಾರೆ. ಹೀಗಾಗಿ ಪರೀಕ್ಷೆಯ ಗಡುವು ವಿಸ್ತರಣೆಯಾಗುವ ಸಾಧ್ಯತೆಯಿದೆ.

ಎಸ್‌ಎಸ್‌ಎಲ್‌ಸಿ-2025 ತಾತ್ಕಾಲಿಕ ವೇಳಾಪಟ್ಟಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ SSLC ಮತ್ತು PUC ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 19 ರವರೆಗೆ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 20 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದೆ. ವೇಳಾಪಟ್ಟಿಯ ಬಗ್ಗೆ ಆಕ್ಷೇಪಣೆಗಳನ್ನು ಡಿಸೆಂಬರ್ 16 ರೊಳಗೆ ಸಲ್ಲಿಸಬಹುದು ಎಂದು ತಿಳಿದು ಬಂದಿದೆ.

ಎಸ್​ಎಸ್​ಎಲ್​ಸಿ ತಾತ್ಕಾಲಿಕ ವೇಳಾಪಟ್ಟಿ

  • ಮಾರ್ಚ್​​ 20 ಗುರುವಾರ: ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್​, ಸಂಸ್ಕೃತ
  • ಮಾರ್ಚ್​ 22 ಶನಿವಾರ: ಸಮಾಜ ವಿಜ್ಞಾನ
  • ಮಾರ್ಚ್​​ 24 ಸೋಮವಾರ: ಇಂಗ್ಲಿಷ್​, ಕನ್ನಡ
  • ಮಾರ್ಚ್​ 27 ಗುರುವಾರ: ಗಣಿತ, ಸಮಾಜ ಶಾಸ್ತ್ರ
  • ಏಪ್ರಿಲ್​ 01 ಮಂಗಳವಾರ: ಅರ್ಥಶಾಸ್ತ್ರ
  • ಏಪ್ರಿಲ್​​ 02 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಪರೀಕ್ಷೆಗಳು ನಡೆಯಲಿವೆ. ಈ ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ.

ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್​ಸೈಟ್​
https://kseab.karnataka.gov.in/ ಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ:CT Ravi case: ಸಿ.ಟಿ.ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ