ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಪ್ತನೊಬ್ಬನಿಂದ ಕಿರುಕುಳ (Harassment), ಕೊಲೆ ಬೆದರಿಕೆ (Death threat) ಹಾಗೂ ಹಣಕ್ಕೆ ಬೇಡಿಕೆ ಮುಂತಾದ ವಿಚಾರಗಳನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಗುತ್ತಿಗೆದಾರರೊಬ್ಬರು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ.
ಈ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ನನ್ನ ಮೇಲಿನ ವಿಪಕ್ಷಗಳ ಆರೋಪ ನಿರಾಧಾರವಾದುದು” ಎಂದಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರು ವಿರುದ್ಧ ಹಣಕ್ಕೆ ಬೇಡಿಕೆ, ಕೊಲೆ ಬೆದರಿಕೆಯಂತ ಗಂಭೀರ ಆರೋಪಗಳನ್ನು ಮಾಡಿ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. 26 ವರ್ಷದ ಸಚಿನ್ 7 ಪುಟಗಳ ಡೆತ್‌ನೋಟ್ ಬರೆದಿಟ್ಟು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಸಚಿನ್ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಡೆತ್ ನೋಟ್ನಲ್ಲಿ ರಾಜು ಕಪನೂರು ವಿರುದ್ಧ ಹಣಕ್ಕೆ ಬೇಡಿಕೆ, ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. 15 ಲಕ್ಷ ರೂಪಾಯಿ ಹಣ ಪಡೆದು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಅಲ್ಲದೆ 1 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಚಿನ್ ಆರೋಪಿಸಿದ್ದಾನೆ. ಸದ್ಯ ಪೊಲೀಸರು ಸಚಿನ್ ಮೃತದೇಹವನ್ನು ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್ ನೋಟ್ನಲ್ಲಿ ರವಿ ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
ಆತ್ಮಹತ್ಯೆಗೆ ಸಂಬಂಧಿಸಿ ವಿಪಕ್ಷಗಳ ಆರೋಪದ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. “ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆಯ ಯುವಕ ಸಚಿನ್ ಪಾಂಚಾಳರ ಸಾವು ದುರದೃಷ್ಟಕರವಾದುದು, ಸಚಿನ್ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಆಶಿಸುತ್ತೇನೆ. ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಈ ಪ್ರಕರಣದಲ್ಲಿ ಹೆಸರಿಸಿರುವ ಆರೋಪಿಗಳ ಹೇಳಿಕೆಗಳು ಒಂದು ಬಗೆಯಲ್ಲಿವೆ, ಸಚಿನ್ ಬರೆದಿದ್ದೆನ್ನಲಾಗಿರುವ ಡೆತ್ ನೋಟ್ ನಲ್ಲಿ ಇನ್ನೊಂದು ಬಗೆಯ ವಿಷಯಗಳು ಕಂಡು ಬರುತ್ತವೆ. ಈಗಾಗಲೇ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂದಿದ್ದಾರೆ, ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರುವಲ್ಲಿ ತನಿಖಾ ಸಂಸ್ಥೆಗಳು ಪರಿಣಾಮಕಾರಿಯಾಗಿ ತನಿಖೆ ಮಾಡಲಿದ್ದಾರೆ.” ಎಂದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆಯ ಯುವಕ ಸಚಿನ್ ಪಾಂಚಾಳರ ಸಾವು ದುರದೃಷ್ಟಕರವಾದುದು,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 26, 2024
ಸಚಿನ್ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಆಶಿಸುತ್ತೇನೆ.
ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಈ ಪ್ರಕರಣದಲ್ಲಿ ಹೆಸರಿಸಿರುವ ಆರೋಪಿಗಳ ಹೇಳಿಕೆಗಳು…
“ಮಿಥ್ಯಾರೋಪ ಮಾಡುವುದು ಬಿಜೆಪಿಯವರ ಹಳೆಯ ಅಭ್ಯಾಸ. ಈ ಹಿಂದೆಯೂ ನನ್ನ ಮೇಲೆ ನಿರಾಧರ ಆರೋಪ ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಿರುತ್ತಾರೆ. ಬಿಜೆಪಿಯವರು ಅ ಪ್ರಯತ್ನ ಮುಂದುವರೆಸುತ್ತಲೇ ಇರಲಿ. ಆದರೆ ಆಧಾರ ರಹಿತ ಆರೋಪಗಳಿಂದ ನನ್ನನ್ನು ಕುಗ್ಗಿಸುವ ಬಿಜೆಪಿಯವರ ಪ್ರಯತ್ನ ಯಶಸ್ವಿಯಾಗುವುದಿಲ್ಲ” ಎಂದು ಎಕ್ಸ್‌ನಲ್ಲಿ ಅವರು ಬರೆದಿದ್ದಾರೆ.
ಇದನ್ನೂ ಓದಿ: Priyank Kharge: ಅಮೆರಿಕ-ಕರ್ನಾಟಕ ನಡುವೆ ಸಿಸ್ಟರ್ ಸಿಟಿ ಪ್ರಸ್ತಾಪ; ಯು.ಎಸ್ ರಾಯಭಾರಿ ಜತೆ ಪ್ರಿಯಾಂಕ್ ಖರ್ಗೆ ಚರ್ಚೆ