Saturday, 11th January 2025

Contractor death case: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ; ಐವರು ಆರೋಪಿಗಳು 5 ದಿನ ಸಿಐಡಿ ಕಸ್ಟಡಿಗೆ

Contractor death case

ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ (Contractor death case) ಸಂಬಂಧಿಸಿ ಬಂಧನವಾಗಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿ ಐವರು ಆರೋಪಿಗಳನ್ನು 5 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೀದರ್‌ನ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಹೌದು ಬೀದರ್‌ನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಸೇರಿದಂತೆ ಐವರನ್ನು ಬೀದರ್ ಜೆಎಂಎಫ್‌ಸಿ ನ್ಯಾಯಾಲಯ 5 ದಿನಗಳ ಸಿಐಡಿ ಕಸ್ಟಡಿಗೆ ನೀಡಿದೆ. ಸಿಐಡಿ ತನಿಖೆ ಭರದಿಂದ ಸಾಗಿದ್ದು, ಡೆತ್ ನೋಟ್‌ನಲ್ಲಿ ಹೆಸರಿಸಲಾದ ಎಂಟು ಜನರ ಪೈಕಿ ಐವರನ್ನು ಬಂಧಿಸಲಾಗಿದೆ.

2024 ಡಿಸೆಂಬರ್ 26 ರಂದು ಬೀದರ್ ನಗರದ ಬಸವೇಶ್ವರ ವೃತ್ತದ ಬಳಿಯ ರೈಲು ಹಳಿಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಮಾರು ಏಳು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. ಡೆತ್‌ ನೋಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಜ್ ಖರ್ಗೆ ಆಪ್ತ ರಾಜು ಕಪನೂ‌ರ್ ಮತ್ತು ಗ್ಯಾಂಗ್‌ನ ಎಂಟು ಸದಸ್ಯರ ಹೆಸರು ಇತ್ತು. ಈ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ಆತ್ಮಹತ್ಯೆಗೂ ಮುನ್ನ ಡೆತ್​ನೋಟ್ ಬರೆದಿಟ್ಟಿದ್ದ ಬೀದರ್ ಗುತ್ತಿಗೆದಾರ ಸಚಿನ್, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿದಂತೆ ಒಟ್ಟು 8 ಜನರ ಹೆಸರನ್ನು ಉಲ್ಲೇಖಿಸಿದ್ದರು. ಈ ಸಂಬಂಧ ನಿನ್ನೆ ಸಿಐಡಿ ಅಧಿಕಾರಗಳು ಬೀದರ್​ನಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗಾಗಿ ಬೀದರ್​ ಬಂದಿರುವ ಸಿಐಡಿ ಅಧಿಕಾರಿಗಳು, ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದ್ದ ಹೆಸರಿನವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಅದರಂತೆ ಐವರು ಬೀದರ್​ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆಯಲ್ಲಿ ಸೂಕ್ತವಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಸಿಐಡಿ, ಆರೋಪಿಗಳನ್ನು ಬಂಧಿಸಿತ್ತು.

ಸದ್ಯ ಆರೋಪಿಗಳಾದ ರಾಜು ಕಪನೂರ್, ಘೋರಕನಾಥ್, ಸತೀಶ್, ನಂದಕುಮಾರ್ ನಾಗಭುಂಜಗೆ, ರಾಮಾಗೌಡ ಪಾಟೀಲ್ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಎಂಟು ಜನರ ಪೈಕಿ ಐವರ ಬಂಧನವಾಗಿದ್ದು ಇನ್ನೂ ಮೂವರಿಗಾಗಿ ಸಿಐಡಿಯಿಂದ ಶೋಧ ನಡೆಸುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಸಿಐಡಿ ಡಿವೈಸ್ ಎಸ್‌ಪಿ ಸುಲೇಮಾನ್ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಬೀದರ್‌ನಲ್ಲಿ ಬೀಡು ಬಿಟ್ಟು ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ.

ಈ ಸುದ್ದಿಯನ್ನೂ ಓದಿ | MP Horror : ಲಿವ್‌ ಇನ್‌ ಗೆಳತಿಯನ್ನು ಕೊಲೆ ಮಾಡಿ ಬರೋಬ್ಬರಿ 10 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಪಾಪಿ!

Leave a Reply

Your email address will not be published. Required fields are marked *