ಬೀದರ್: ಬೀದರ್‌ನಲ್ಲಿ (Bidar news) ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ (Contractor Death) ಪ್ರಕರಣದ ವಿಚಾರಣೆಗಾಗಿ ಸಿಐಡಿ (CID Enquiry) ಅಧಿಕಾರಿಗಳ ತಂಡ ಇಂದು ಬೀದರ್ ಜಿಲ್ಲೆಗೆ ಭೇಟಿ ನೀಡಲಿದೆ.
ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ವಿವಾದ ಎಬ್ಬಿಸಿತ್ತು. ಸಚಿನ್ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಧಿಕಾರಿಗಳು ತನಗೆ ನೀಡುತ್ತಿದ್ದ ಕಿರುಕುಳವನ್ನು ಉಲ್ಲೇಖಿಸಿದ್ದಾನೆ. ಇದರಿಂದಾಗಿ ಸಚಿವರ ಕುರ್ಚಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದ ವಿಪಕ್ಷ, ಖರ್ಗೆ ರಾಜೀನಾಮೆಗೆ ಒತ್ತಾಯಿಸಿದೆ. ಒತ್ತಡ ಹೆಚ್ಚಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.
ಇಂದು ಬೀದರ್‌ಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಲಿದೆ. ಸಿಐಡಿ ಎಸ್ ಪಿ ಸುಲೇಮಾನ್ ತಹಶೀಲ್ದಾರ್ ನೇತೃತ್ವದ ತನಿಖಾ ತಂಡ ಬೀದರ್‌ಗೆ ಭೇಟಿ ನೀಡಲಿದೆ. ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ್ ನಿವಾಸಕ್ಕೆ ಸಿಐಡಿ ತನಿಖೆ ತಂಡ ಭೇಟಿ ನೀಡುವ ಸಾಧ್ಯತೆ ಇದ್ದು, ಕುಟುಂಬ ಸದಸ್ಯರು ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ಇನ್ನೊಂದು ಕಡೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಸಚಿನ್ ಪಾಂಚಾಳ್ ಗುತ್ತಿಗೆದಾರನೆ ಅಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದು, ಆತ ಗುತ್ತಿಗೆದಾರ ಆಗಿರುವಂತಹ ದಾಖಲೆಗಳು ಎಲ್ಲಿಯೂ ಕೂಡ ಇಲ್ಲ ಎಂದು ತಿಳಿಸಿದ್ದಾರೆ. ಸಚಿನ್ ಸಹೋದರಿ ಸುರೇಖಾ ಅವರು, ರಾಜ್ಯ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಈ ಕುರಿತು ಪತ್ರ ಬರೆಯಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.