Monday, 13th January 2025

Contractors Association: ಬಾಕಿ ಬಿಲ್‌ ಪಾವತಿಸದಿದ್ರೆ ಉಗ್ರ ಹೋರಾಟ; 7 ಸಚಿವರಿಗೆ ಗುತ್ತಿಗೆದಾರರ ಸಂಘ ಪತ್ರ

Contractors Association

ಬೆಂಗಳೂರು: ಬಾಕಿ ಬಿಲ್‌ ಪಾವತಿಸುವುದು ಹಾಗೂ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿ ಏಳು ಸಚಿವರಿಗೆ ಪತ್ರ ಬರೆದಿರುವ ರಾಜ್ಯ ಗುತ್ತಿಗೆದಾರರ ಸಂಘವು (Contractors Association), ತಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ, ಎನ್. ಎಸ್. ಬೋಸರಾಜು, ದಿನೇಶ್ ಗುಂಡೂರಾವ್ ಮತ್ತು ರಹೀಂ ಖಾನ್ ಅವರಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಸರ್ಕಾರದಿಂದ ಗುತ್ತಿಗೆದಾರರಿಗೆ ಸಾಕಷ್ಟು ಹಣ ಪಾವತಿ ಬಾಕಿ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಇಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ಬಾಕಿ ಕೇಳಿದರೆ ಸಚಿವರನ್ನು ಭೇಟಿಯಾಗಿ ಎನ್ನುತ್ತಾರೆ. ಯಾವುದೇ ಸಮಸ್ಯೆಗೂ ಅವರು ಸ್ಪಂದಿಸುವುದಿಲ್ಲ. ಸಚಿವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಗುತ್ತಿಗೆದಾರರ ಸಂಘವು ಪತ್ರದಲ್ಲಿ ಅಸಮಾಧಾನ ಹೊರಹಾಕಿದೆ.

ಈ ಸರ್ಕಾರಕ್ಕೆ ಗುತ್ತಿಗೆದಾರರ ಸಂಕಷ್ಟದ ಬಗ್ಗೆ ಸ್ವಲ್ಪವೂ ಕರುಣೆ ಹೊಂದಿಲ್ಲ ಎಂದೆನಿಸುತ್ತದೆ. ಈ ಪತ್ರ ತಲುಪಿ ಏಳು ದಿನದೊಳಗೆ ಗುತ್ತಿಗೆದಾರರ ಸಭೆ ಕರೆದು ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತದೆ. ಹಿಂದಿನ ಸರ್ಕಾರದ ವಿರುದ್ಧ ಗುತ್ತಿಗೆದಾರರು ಹೋರಾಟ ಮಾಡಿರುವುದು ತಮಗೆ ತಿಳಿದಿದೆ. ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸದಿದ್ದರೆ ಮುಂದೆ ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿದ್ದೇವೆ. ಆದಷ್ಟೂ ಬೇಗನೆ ಈ ಸಮಸ್ಯೆಗೆ ಪರಿಹಾರ ಹುಡುಕಲು ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಸರ್ಕಾರದಿಂದ ಗುತ್ತಿಗೆದಾರರಿಗೆ 32 ಸಾವಿರ ಕೋಟಿ ರೂಪಾಯಿ ಹಣ ಪಾವತಿ ಬಾಕಿ ಇದೆ ಎಂದು ಗುತ್ತಿಗೆದಾರರ ಸಂಘ ಹೇಳಿದೆ. ಬೃಹತ್ ನೀರಾವರಿ ಇಲಾಖೆಯೊಂದರಿಂದಲೇ 14,000 ಕೋಟಿ ರೂ.ಗೂ ಅಧಿಕ ಹಣ ಬಾಕಿ ಇದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಕಮಿಷನ್ ಕೊಟ್ಟರೆಯೇ ಗುತ್ತಿಗೆ ನೀಡುವ ಕೆಲಸ ಆಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಹಂಗಾಮಿ ಅಧ್ಯಕ್ಷರಾದ ಜಗನ್ನಾಥ ಬಿ ಶೇಗಣಿ ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Mahakumbh 2025: ಮಹಾಕುಂಭ ಮೇಳದಿಂದ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ಸೇರುವ ಹಣವೆಷ್ಟು? ಇಲ್ಲಿದೆ ಮಾಹಿತಿ

Leave a Reply

Your email address will not be published. Required fields are marked *