ಬೆಳಗಾವಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ವರು ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 18 ಮಂದಿ ಸೇರಿ 22 ಶಿಕ್ಷಕರಿಗೆ ಕೋವಿಡ್- 19 ದೃಢಪಟ್ಟಿದೆ.
‘ಸರ್ಕಾರದ ಸೂಚನೆಯಂತೆ ಶಾಲೆ- ಕಾಲೇಜು ಆರಂಭಿಸಲಾಗಿದೆ. ಅದೇ ರೀತಿ, ವಿದ್ಯಾಗಮ ಚಟುವಟಿಕೆಗಳನ್ನು ಕೂಡ ನಡೆಸ ಲಾಗುತ್ತಿದೆ. ಇದಕ್ಕೂ ಮುನ್ನ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿತ್ತು. ಕ್ರಮೇಣ ವರದಿಗಳು ಬರುತ್ತಿವೆ ಎಂದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.
ಹುಕ್ಕೇರಿಯಲ್ಲಿ ಇಬ್ಬರು ಹಾಗೂ ರಾಯಬಾಗದಲ್ಲಿ ಇಬ್ಬರು ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿ 4, ಗ್ರಾಮೀಣದಲ್ಲಿ 10, ರಾಮದುರ್ಗದಲ್ಲಿ 3, ಕಿತ್ತೂರಿನ ಒಬ್ಬರು ಸೇರಿ ಒಟ್ಟು 18 ಶಿಕ್ಷಕರಿಗೆ ಕೋವಿಡ್ ದೃಢಪಟ್ಟಿದೆ. ತಾಲ್ಲೂಕಿನ ಕಡೋಲಿಯ ಶಾಲೆಯಲ್ಲಿ ನಾಲ್ವರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದ್ದರಿಂದಾಗಿ ಆ ಶಾಲೆಯನ್ನು ಬಂದ್ ಮಾಡಲಾಗಿದೆ. ವಾರದ ಬಳಿಕ ಶಾಲೆಯನ್ನು ಸ್ಯಾನಿಟೈಸ್ ಮಾಡಿ ಮತ್ತೆ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
ಈ ಶಿಕ್ಷಕರು ಮಕ್ಕಳ ಸಂಪರ್ಕಕ್ಕೆ ಬಂದಿರಲಿಲ್ಲ. ಹೀಗಾಗಿ ಪೋಷಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು. ಜಿಲ್ಲೆಯಲ್ಲಿ ಇನ್ನೂ ನೂರಾರು ಶಿಕ್ಷಕರ ಕೋವಿಡ್ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕೋವಿಡ್ ನೆಗೆಟಿವ್ ಬಂದವರನ್ನು ಮಾತ್ರ ಶಾಲೆಯಲ್ಲಿ ಬಳಸಲಾಗುತ್ತಿದೆ.