Saturday, 2nd November 2024

Cracker Sales: ಬೆಂಗಳೂರಲ್ಲಿ ಪಟಾಕಿ ಅಕ್ರಮ ಮಾರಾಟ, ದಾಸ್ತಾನು: 56 ವ್ಯಾಪಾರಿಗಳ ವಿರುದ್ಧ ಎಫ್‌ಐಆರ್‌

Cracker Sales

ಬೆಂಗಳೂರು: ನಗರದಲ್ಲಿ ಪಟಾಕಿ ಅಕ್ರಮ ಮಾರಾಟ, ದಾಸ್ತಾನು ಮಾಡಿದ್ದ 56 ವ್ಯಾಪಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅ.31 ರಿಂದ ನವೆಂಬರ್ 1ರವರೆಗೆ ಬೆಂಗಳೂರಿನ ಎಲ್ಲಾ ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಪರಿಶೀಲನೆ ವೇಳೆ 56ಕ್ಕೂ ಅಧಿಕ ವ್ಯಾಪಾರಿಗಳು ನಿಯಮ ಉಲ್ಲಂಘಿಸಿ ಪಟಾಕಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.

ಬೆಂಗಳೂರಿನ 72 ಮೈದಾನಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ 315 ಪರವಾನಗಿ ನೀಡಲಾಗಿತ್ತು. ಪರವಾನಗಿ ಪಡೆದುಕೊಳ್ಳದೆ ಕೆಲವರು ರಸ್ತೆ ಬದಿ, ತಳ್ಳುವ ಗಾಡಿಗಳಲ್ಲಿಯೂ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಉತ್ತರ ವಲಯದಲ್ಲಿ 9, ಆಗ್ನೇಯ ವಲಯದಲ್ಲಿ 9, ಈಶಾನ್ಯ ವಲಯದಲ್ಲಿ 19, ವೈಟ್‌ಫೀಲ್ಡ್‌ ವಲಯದಲ್ಲಿ 9 ಸೇರಿ ಒಟ್ಟು 56 ಪ್ರಕರಣ ದಾಖಲಾಗಿವೆ. ಶನಿವಾರ ಮತ್ತು ಭಾನುವಾರ ಕೂಡ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Physical Abuse: ಮಹಿಳೆಯ ನಗ್ನ ದೃಶ್ಯ ಸೆರೆಹಿಡಿದು ಬ್ಲ್ಯಾಕ್‌ಮೇಲ್, ಅತ್ಯಾಚಾರ: ಆರೋಪಿ ಪರಾರಿ

ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಕನ್ನಡದಲ್ಲೂ ವಿವರ ಮುದ್ರಣ ಕಡ್ಡಾಯ: ಸಿಎಂ

ಬೆಂಗಳೂರು: ರಾಜ್ಯದಲ್ಲಿರುವ (Karnataka) ಉದ್ಯಮಗಳು ತಯಾರಿಸುವ ಉತ್ಪನ್ನಗಳ ಮೇಲೆ ಕನ್ನಡದಲ್ಲೂ ವಿವರಗಳನ್ನು ಮುದ್ರಿಸುವುದು ಕಡ್ಡಾಯ (Mandatory) ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕನ್ನಡ ರಾಜ್ಯೋತ್ಸವ (Kannada Rajyotsava) ದಿನ ಘೋಷಿಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಶುಕ್ರವಾರ ನಡೆದ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿನ ಉದ್ಯಮಗಳು ತಯಾರಿಸುವ ಉತ್ಪನ್ನಗಳ ಮೇಲೆ ಇಂಗ್ಲಿಷ್‌ನಲ್ಲಿ ಮಾತ್ರ ಹೆಸರು ಮುದ್ರಿತವಾಗಿರುತ್ತದೆ. ಇನ್ನು ಮುಂದೆ ಕನ್ನಡದಲ್ಲಿ ಹೆಸರು ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದವರು ನುಡಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಇದ್ದ ಕಟ್ಟಡವನ್ನು ಅಠಾರ ಕಚೇರಿ ಎಂದು ಕರೆಯುತ್ತಾರೆ. ಆ ಕಟ್ಟಡದಲ್ಲಿ ಕನ್ನಡ ಸಂಗ್ರಹಾಲಯ ಸ್ಥಾಪಿಸಲಾಗುವುದು. ಬೇರೆ ರಾಜ್ಯದಿಂದ ಜನ ಬಂದರೂ ಅವರಿಗೆ ಕನ್ನಡ ಕಲಿಸಬೇಕು. ಕನ್ನಡದಲ್ಲಿ ವ್ಯವಹಾರ ಮಾಡುವಂತೆ ಮಾಡಬೇಕು. ಇಂತಹ ಕೆಲಸವನ್ನು ಸರ್ಕಾರ ಮಾಡಲಿದ್ದು, ನಾಗರೀಕರು ಕೂಡ ಎಲ್ಲರಿಗೂ ಕನ್ನಡ ಕಲಿಸುತ್ತೇವೆ ಎಂದು ಪ್ರಮಾಣ ಮಾಡಬೇಕು ಎಂದು ಹೇಳಿದ್ದಾರೆ.

ಕನ್ನಡ ಹಾಗೂ ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಇದು ನಾಡದ್ರೋಹ. ಅಂತಹವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತದೆ. ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ ಅವರು ಯಾವುದೇ ಜಾತಿ, ಧರ್ಮ, ಭಾಷೆಯವರೇ ಆಗಿದ್ದರೂ ಕನ್ನಡಿಗರೇ. ಕನ್ನಡವನ್ನು ಗೌರವಿಸಬೇಕು. ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್‌ ಆಗಿ ಎಚ್ಚರಿಕೆ ನೀಡಿದರು.

ನಾವು ಯಾವುದೇ ಕಾರಣಕ್ಕೂ ನಮ್ಮ ಭಾಷೆಯನ್ನು ಬಲಿ ಕೊಟ್ಟು ಉದಾರಿಗಳಾಗಬಾರದು. ಕನ್ನಡ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದರು. ಕರ್ನಾಟಕದಲ್ಲಿ ಕನ್ನಡವೇ ಅಗ್ರ ಹಾಗೂ ಸಾರ್ವಭೌಮ ಭಾಷೆ. ನಾವು ಸಹ ಕನ್ನಡಗರಿಗಾಗಿಯೇ ಇರುತ್ತೇವೆ. ಬೇರೆಯವರಿಗೂ ಕನ್ನಡ ಕಲಿಸುತ್ತೇವೆ ಎಂದು ನಾವು ಪ್ರತಿಜ್ಞೆ, ಶಪಥ ಮಾಡೋಣ. ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಿ, ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸುವ ಮೂಲಕ ಕನ್ನಡ ವಾತಾವರಣವನ್ನು ನಿರ್ಮಿಸಿ ಎಂದು ರಾಜ್ಯದ ಜನರಿಗೆ ಕರೆ ನೀಡಿದರು.

ಇದನ್ನೂ ಓದಿ: Rajyotsava Award 2024: 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ