Thursday, 28th November 2024

Crime News: 1 ತಿಂಗಳು, 5 ಕೊಲೆ; ಊರೂರು ಅಲೆಯುತ್ತಿದ್ದ ಕೀಚಕ ಸೆರೆ ಸಿಕ್ಕಿದ್ದೇ ರೋಚಕ

Crime News

ಗಾಂಧಿನಗರ: ತಿಂಗಳ ಅಂತರದಲ್ಲಿ 5 ರೈಲು ಪ್ರಯಾಣಿಕರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ರೋಚಕವಾಗಿ ಸೆರೆ ಹಿಡಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ರೈಲು ಪ್ರಯಾಣಿಕರನ್ನು ಗುರಿಯಾಗಿಸಿ ಅವರನ್ನು ಕೊಲೆ ಮಾಡಿ ಊರಿಂದ ಊರಿಗೆ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆ ಕುರಿತಾದ ವಿವರ ಇಲ್ಲಿದೆ (Crime News).

ಬಂಧಿತನನ್ನು ಹರಿಯಾಣದ ರೋಟಕ್‌ ನಿವಾಸಿ ರಾಹುಲ್‌ ಕರವೀರ್‌ ಜಾಟ್‌ ಎಂದು ಗುರುತಿಸಲಾಗಿದೆ. ಗುಜರಾತ್‌ನಲ್ಲಿ ಇತ್ತೀಚೆಗೆ 19 ವರ್ಷದ ಯುವತಿಯ ಕೊಲೆಯಾಗಿತ್ತು. ಅದರ ಬೆನ್ನು ಹತ್ತಿ ಹೊರಟ ಪೊಲೀಸರು ರಾಹುಲ್‌ ಕರವೀರ್‌ ಜಾಟ್‌ ಬಂಧಿಸಿದರು. ಇದೇ ವೇಳೆ ಆತ ವಿವಿಧ ಕಡೆಗಳಲ್ಲಿ 1 ತಿಂಗಳ ಅಂತರದಲ್ಲಿ ಇತರ ನಾಲ್ವರನ್ನು ಕೊಲೆ ಮಾಡಿರುವ ಬೆಚ್ಚಿ ಬೀಳಿಸುವ ಅಂಶ ಹೊರ ಬಿದ್ದಿದೆ. ಗುಜರಾತ್‌ನ ವಾಪಿ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸುವ ಮುನ್ನ ಪೊಲೀಸರು ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಿದ್ದರು ಮತ್ತು ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 2,000 ಸಿಸಿ ಟಿವಿ ಕ್ಯಾಮೆರಾ ಫೂಟೇಜ್‌ ಪರಿಶೀಲಿಸಿದ್ದರು.

ರೈಲು ಪ್ರಯಾಣಿಕರೇ ಈತನ ಟಾರ್ಗೆಟ್‌

ಸದ್ಯ ಪೊಲೀಸ್‌ ವಶದಲ್ಲಿರುವ ರಾಹುಲ್‌ ತಾನು ನಡೆಸಿದ ಕೃತ್ಯಗಳನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ʼʼರೈಲು ಪ್ರಯಾಣಿಕರನ್ನು ಕೊಲೆ ಮಾಡಿ ಅವರಿಂದ ಹಣ ದೋಚಿರುವುದನ್ನು ಸಮ್ಮತಿಸಿದ್ದಾನೆ. ವಿವಿಧ ಕಡೆಗಳಿಗೆ ಸಂಚರಿಸುವ ರೈಲು ಹತ್ತುವ ಅವನ ಮುಖ್ಯ ಟಾರ್ಗೆಟ್‌ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರು. ಅದರಲ್ಲಿಯೂ ವಿಶೇಷ ಚೇತನ ಮಹಿಳೆಯರು. ಪದೇ ಪದೆ ಸ್ಥಳ ಬದಲಾಯಿಸುತ್ತ, ರೈಲ್ವೆ ಸ್ಟೇಷನ್‌ನಲ್ಲಿ ತಂಗಿ, ಸಿಕ್ಕ ರೈಲು ಹತ್ತು ಊರೂರು ಅಲೆಯುತ್ತಿದ್ದ ಆತನ ಪತ್ತೆಯೇ ಸವಾಲಾಗಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಆತ ಸಿಕ್ಕಿ ಬಿದ್ದಿದ್ದಾನೆ. ಈತ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ತಲಾ 1 ಕೊಲೆ ಮಾಡಿದ್ದಾನೆ ಎಂದು ಎಸ್‌ಪಿ ಕರಣ್‌ರಾಜ್‌ ವಘೇಲಾ ಮಾಹಿತಿ ನೀಡಿದ್ದಾರೆ.

ನ. 14ರಂದು ಗುಜರಾತ್‌ನ ಉದ್ವಾಡಾ ರೈಲ್ವೆ ನಿಲ್ದಾಣದ ಹಳಿಗಳ ಬಳಿ ಮಹಿಳೆಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ವಲ್ಸಾದ್ ಜಿಲ್ಲಾ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದಾಗ ಪ್ರಕರಣಕ್ಕೆ ರೋಚಕ ತಿರುವು ಲಭಿಸಿತು. ಈ ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು. ಹಲವು ತಂಡಗಳನ್ನು ರಚಿಸಿ ಕೊಲೆಗಾರನ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದರು. ಈ ವೇಳೆ ಮಹಿಳೆಯ ಶವ ಪತ್ತೆಯಾದ ಪ್ರದೇಶದಿಂದ ವಶಪಡಿಸಿಕೊಳ್ಳಲಾದ ಅದೇ ಬಟ್ಟೆಗಳನ್ನು ಧರಿಸಿದ ಆರೋಪಿಯ ಚಲನವಲ ರೈಲ್ವೆ ನಿಲ್ದಾಣದ ಸಿಸಿಟಿವಿಗಳಲ್ಲಿಸೆರೆಯಾಗಿತ್ತು. ಇದರ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆಗ ಆತ ಈ ಹಿಂದೆ ನಡೆಸಿದ್ದ ಕೊಲೆಗಳ ಬಗ್ಗೆ ಬಾಯ್ಬಿಟ್ಟಿದ್ದ.

ಮೂಲ್ಕಿಯಲ್ಲಿಯೂ ಕೃತ್ಯ ಎಸಗಿದ್ದ

ಸೆರೆಯಾಗುವ ಕೆಲವು ದಿನಗಳ ಹಿಂದೆಯಷ್ಟೇ ಆತ ತೆಲಂಗಾಣದ ಸಿಕಂದರಬಾದ್‌ ರೈಲ್ವೆ ಸ್ಟೇಷನ್‌ ಬಳಿ ಮಹಿಳೆಯನ್ನು ಕೊಲೆ ಮಾಡಿದ್ದ. ಅದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಸೋಲ್ಹಾಪುರ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರನ್ನು ಸಾಯಿಸಿದ್ದ. ಇನ್ನು ಪಶ್ಚಿಮ ಬಂಗಾಳದ ಹೌರಾದಲ್ಲಿಯೂ ಕೊಲೆ ಮಾಡಿದ್ದ. ಅಲ್ಲದೆ ಕರ್ನಾಟಕದ ಮೂಲ್ಕಿಯ ರೈಲು ಪ್ರಯಾಣಿಕರೊಬ್ಬರ ಕೊಲೆಯ ಹಿಂದೆಯೂ ಈತನ ಕೈವಾಡವಿದೆ.

ಕೆಲವು ತಿಂಗಳ ಹಿಂದೆಯಷ್ಟೇ ರಾಜಸ್ಥಾನದ ಜೋಧಾಪುರ ಸೆಂಟ್ರಲ್‌ ಜೈಲಿನಿಂದ ಬಿಡುಗಡೆಗೊಂಡಿದ್ದ ಈತನ ವಿರುದ್ಧ ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಸುಮಾರು 13 ದೂರು ದಾಖಲಾಗಿವೆ.

ಈ ಸುದ್ದಿಯನ್ನೂ ಓದಿ: Viral News: ಸ್ನೋ ಹಿಲ್ ಸ್ಟೇಷನ್‌ನಲ್ಲಿ ವೆಕೇಷನ್ ಪ್ಲ್ಯಾನ್ ಮಾಡಿದ್ದವರು ಜೈಲು ಸೇರಿದರು; ದಿಲ್ಲಿಯ ಖತರ್ನಾಕ್ ದರೋಡೆ ಗ್ಯಾಂಗ್‌ನ ರೋಚಕ ಕಹಾನಿ