ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ವಿರುದ್ಧ ಅಶ್ಲೀಲ ಪದ ಬಳಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ.ಟಿ.ರವಿ (CT Ravi) ಅವರನ್ನು ಬಂಧಿಸಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಸುವರ್ಣಸೌಧದಂದಲೇ ಸಿ.ಟಿ.ರವಿ ಅವರನ್ನು ಬಂಧಿಸಿದ್ದಾರೆ. ಬಲವಂತಾಗಿಯೇ ಅವರನ್ನು ಎತ್ತಿಕೊಂಡು ಬಂದು ಪೊಲೀಸರು ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.
ಸಿ.ಟಿ.ರವಿ ತಮ್ಮ ವಿರುದ್ದ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಬಿಎಸ್‌ಎಸ್ ಕಾಯ್ದೆ 75 ಮತ್ತು 79ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಲೈಂಗಿಕ ಕಿರುಕುಳ, ಮಹಿಳೆಯ ಇಚ್ಛೆಯ ವಿರುದ್ಧ ಅಶ್ಲೀಲತೆ ತೋರುವುದು, ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಟೀಕೆ ಮಾಡುವುದು ಸೇರಿ ಬಿಎನ್‌ಎಸ್ ಕಾಯ್ದೆಯಡಿ ಹೀರೇಬಾಗೇವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ರವಿ ಅವರನ್ನು ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ.
ಸಿ.ಟಿ.ರವಿ ಹೇಳಿದ್ದೇನು?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆ ಸಂಬಂಧ ವಿಧಾನ ಪರಿಷತ್‌ನಲ್ಲಿ ಗುರುವಾರ ಬೆಳಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿ.ಟಿ. ರವಿ, ಲಕ್ಷ್ಮೀ ಹೆಬ್ಬಾಳಕರ್ ಅವರ ಕುರಿತು ಅವಹೇಳನಕಾರಿ ಪದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ಸಂಬಂಧ ಕಾಂಗ್ರೆಸ್ ಮುಖಂಡರು ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ದೂರು ನೀಡಿದ್ದಾರೆ. ಸಿ.ಟಿ.ರವಿ ಅವರನ್ನು ಸದನದಿಂದ ಅಮಾನತುಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದು ಕ್ರಿಮಿನಲ್ ಅಪರಾಧ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಮನಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸಚಿವರ ವಿರುದ್ಧ ಸಿ.ಟಿ. ರವಿ, ಅಶ್ಲೀಲ ಪದ ಬಳಸಿದ ಪ್ರಕರಣ ನಡೆಯುತ್ತಿದ್ದಂತೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಸಚಿವ ಹಾಗೂ ಪರಿಷತ್‌ನ ಕಾಂಗ್ರೆಸ್ ಸಭಾ ನಾಯಕ ಬೋಸರಾಜು, ಸಚಿವರಾದ ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ಡಾ. ಶರಣಪ್ರಕಾಶ್ ಪಾಟೀಲ್, ಹಿರಿಯ ಸದಸ್ಯರಾದ ಹರಿಪ್ರಸಾದ್, ನಾಗರಾಜ್ ಯಾದವ್, ಉಮಾಶ್ರೀ, ಶಾಸಕಿಯರಾದ ನಯನ ಮೋಟಮ್ಮ, ರೂಪಾ ಶಶಿಧರ್, ಲತಾ ಮಲ್ಲಿಕಾರ್ಜುನ್, ಅನ್ನಪೂರ್ಣ ತುಕಾರಂ ಸೇರಿದಂತೆ ಕಾಂಗ್ರೆಸ್ ಶಾಸಕರು, ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಸಿ.ಟಿ.ರವಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಈ ಸುದ್ದಿಯನ್ನೂ ಓದಿ: CT Ravi: ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ; ಸಿ.ಟಿ. ರವಿ ವಿರುದ್ಧ ಕೇಸ್