ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಅವರು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ (Human rights commission) ಇ-ಮೇಲ್ ಮೂಲಕ 13 ಪುಟಗಳ ದೂರನ್ನು ಸಲ್ಲಿಸಿದ್ದಾರೆ. ಬಂಧನದ ವೇಳೆ ಪೊಲೀಸ್ ದೌರ್ಜನ್ಯ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಆರೋಪಿಸಿದ್ದಾರೆ.
ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನಡುವಿನ ಮಾತಿನ ಯುದ್ಧದ ಪ್ರಕರಣ ಈ ಮೂಲಕ ಮುಂದುವರೆದಿದೆ. ಇದೀಗ ದೂರಿನಲ್ಲಿ ಡಿಸಿಎಂ ಡಿಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅವರ ಪಿಎಗಳು ಹಾಗೂ ಹಿರೇಬಾಗೇವಾಡಿ ಸಿಪಿಐ ರಾಜು ಪಾಟೀಲ್ ಹೆಸರು ಕೂಡ ಉಲ್ಲೇಖಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಹಿಂಸೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಡಿಜಿಪಿ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಒಂದು ಕಡೆ ಸಿಐಡಿ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಸಿಟಿ ರವಿಗೂ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ರಾಜ್ಯಪಾಲರಿಗೆ, ಡಿಐಜಿ ಅಲೋಕ್ ಮೋಹನ್ ಅವರಿಗೆ ಸಿಟಿ ರವಿ ದೂರು ನೀಡಿದ್ದು, ನಾನು ಕೊಟ್ಟ ಕೇಸ್ ಎಫ್ಐಆರ್ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಕರಣದಲ್ಲಿ ಮಹಜರು ನಡೆಸಲು ಸಿಐಡಿ ಸಭಾಪತಿಗಳಿಗೆ ಪತ್ರ ಬರೆದು ಅನುಮತಿ ಕೇಳಿದೆ. ಆದರೆ ಹೇಗೆ ಮಹಜರು ಮಾಡ್ತೀರಿ ಎಂದು ವಿವರವಾಗಿ ತಿಳಿಸುವಂತೆ ಸಭಾಪತಿ ಹೊರಟ್ಟಿ ಪ್ರಶ್ನಿಸಿದ್ದಾರೆ. ಸಿಐಡಿ ಉತ್ತರ ಬಂದ ಬಳಿಕ ಮಹಜರು ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿ.ಟಿ ರವಿ, ಸದನದೊಳಗೆ ನಡೆದ ಘಟನೆಯಾಗಿದ್ದರಿಂದ ಸಭಾಪತಿಗಳದ್ದೇ ಅಂತಿಮ ತೀರ್ಮಾನ ಎಂದು ಹೇಳಿದ್ದರು.
ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿರುವುದಕ್ಕೆ ಗರಂ ಆಗಿದ್ದ ಸಿ.ಟಿ.ರವಿ ಇತ್ತೀಚೆಗೆ ಡಿಜಿ& ಐಜಿಪಿ ಅಲೋಕ್ ಮೋಹನ್ ಭೇಟಿ ಆಗಿ 8 ಪುಟಗಳ ದೂರು ನೀಡಿದ್ದರು. ಇಡೀರಾತ್ರಿ ಅಲೆದಾಡಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.