ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಕುರಿತು ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಬಂಧನವಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿ.ಟಿ. ರವಿಯವರನ್ನು (CT Ravi) ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಸಿಟಿ ರವಿ ವಿರುದ್ಧದ ಎಫ್ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿದೆ. ಆದರೆ, ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿದೆ. ಇನ್ನು ಜಾಮೀನಿಗಾಗಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಡಿಸೆಂಬರ್ 21ಕ್ಕೆ ಮುಂಡೂಡಿತ್ತು. ಆದರೆ ಇದೀಗ ಹೈಕೋರ್ಟ್ನಲ್ಲಿ ಬಿಜೆಪಿ ನಾಯಕನಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಆರೋಪಿ, ದೂರುದಾರರು ಇಬ್ಬರೂ ಶಾಸಕರಾಗಿದ್ದು, ವಿಧಾನ ಪರಿಷತ್ನಲ್ಲಿ ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ. ಈ ಪ್ರಕರಣದಲ್ಲಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದೆ, 41 ಎ ಅಡಿ ನೋಟಿಸ್ ನೀಡಿ, ಬಂಧನಕ್ಕೆ ಪೊಲೀಸರು ಕಾರಣ ನೀಡಬೇಕಿತ್ತು. ಆದರೆ ಇದನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಿಲ್ಲ. ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ ಎಂದು ಸಿಟಿ ರವಿ ವಕೀಲರು ವಾದಿಸಿದ್ದಾರೆ. ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಿರುವುದಾಗಿ ವರದಿಯಿದೆ. ಘಟನೆಯ ಬಗ್ಗೆ ಏನನ್ನೂ ರೆಕಾರ್ಡ್ ಮಾಡಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಆರೋಪಿ ಸಿಟಿ ರವಿಯನ್ನು ಬಂಧಿಸಲು ಹಲ್ಲೆ ನಡೆಸುವ ಅಗತ್ಯವಿರಲಿಲ್ಲ. ಕಾನೂನು ಕ್ರಮ ಪಾಲಿಸಿ ಕ್ರಮ ಕೈಗೊಳ್ಳಬಹುದಿತ್ತು. ವಿಧಾನಪರಿಷತ್ ಪ್ರತಿಪಕ್ಷದ ಶಾಸಕರಾಗಿದ್ದಾರೆ. ಹೀಗಾಗಿ ಪರಾರಿಯಾಗುವ ಸಾಧ್ಯತೆ ಇಲ್ಲ. ಇದರಿಂದ ತಕ್ಷಣ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.
ಇನ್ನು ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯವು, ನಾಳೆಗೆ ಜಾಮೀನು ಅರ್ಜಿಯನ್ನು ಮುಂದೂಡಿದೆ. ಬೆಳಗಾವಿಯ ಜೆಎಂಎಫ್ ಸಿ ನ್ಯಾಯಾಲಯವು ಪರಿಷತ್ ಸದಸ್ಯ ಸಿ.ಟಿ ರವಿ ಅವರ ಬಂಧನದ ನಂತರ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಆದರೆ, ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಪರವಾಗಿ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದರೆ, ಸಿ.ಟಿ ರವಿ ಪರವಾಗಿ ಅಶೋಕ್ ಹಾರನಹಳ್ಳಿ ಪ್ರತಿವಾದ ಮಂಡಿಸಿದರು.
ಇಂದು ನನ್ನ ಮೇಲೆ ದಾಖಲಾದ ಸುಳ್ಳು ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನನ್ನ ಜೊತೆಗಿದ್ದು ಧೈರ್ಯ ತುಂಬಿದ ನನ್ನ ನೆಚ್ಚಿನ @BJP4Karnataka ದ ಕಾರ್ಯಕರ್ತ ಬಂಧುಗಳಿಗೆ, ಜೊತೆಗೆ ನಿಂತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra , @BJP4India ಎಲ್ಲಾ ರಾಷ್ಟೀಯ ನಾಯಕರು, ವಿರೋಧ ಪಕ್ಷದ ನಾಯಕರಾದ @RAshokaBJP, ಶಾಸಕರು…
— C T Ravi 🇮🇳 ಸಿ ಟಿ ರವಿ (@CTRavi_BJP) December 20, 2024
ಸತ್ಯಕ್ಕೆ ಜಯ ಸಿಕ್ಕಿದೆ ಎಂದ ಸಿ.ಟಿ.ರವಿ
ಸತ್ಯಕ್ಕೆ ಜಯ ಸಿಕ್ಕಿದೆ. ನಾನು ಆ ರೀತಿ ಮಾತನಾಡಿರುವ ಆಡಿಯೊ ಅಥವಾ ವಿಡಿಯೊ ಲಭ್ಯವಾಗಿಲ್ಲ ಎಂದು ಸಭಾಪತಿಗಳೇ ಹೇಳಿದ್ದಾರೆ. ಅವರು ಹೇಳಿದ ಮೇಲೂ ಬೇರೆ ಬೇರೆ ರೀತಿ ಆರೋಪ ಹೊರಿಸಿ, ಕೇಸ್ ಹಾಕಿದ್ದಾರೆ. ನೆನ್ನೆ ರಾತ್ರಿ ನನ್ನನ್ನು ಟೆರರಿಸ್ಟ್ ತರಹ ನಡೆಸಿಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಸಮಾನ. ಆದರೆ, ನನ್ನ ದೂರು ಪಡೆಯಲು ನಿರಾಕರಿಸಿದ್ದಾರೆ. ಹೆಬ್ಬಾಳ್ಕರ್ ಕಡೆಯವರು ನೀಡಿದ ದೂರು ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.