ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್) ನಡೆದಿದೆ ಎನ್ನಲಾದ 47.50 ಕೋಟಿ ರೂ. ಅಕ್ರಮ ಆರೋಪ ಸಂಬಂಧ ನಿಗಮದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಡಿ.ಎಸ್. ವೀರಯ್ಯ (D.S. Veeraiah) ವಿರುದ್ಧದ ತನಿಖೆ ಮತ್ತು ಆರೋಪ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಡಿ.ಎಸ್.ವೀರಯ್ಯ ಅವರು ಪ್ರಕರಣ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು , ಡಿಡಿಯುಟಿಟಿಎಲ್ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಮತ್ತು ಮಾಜಿ ಅಧ್ಯಕ್ಷ ವೀರಯ್ಯ ಪಿತೂರಿ ನಡೆಸಿ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪವಾಗಿದೆ. ಅದರೆ, ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ನಡೆಸಿಲ್ಲ ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಸೆಕ್ಷನ್ 17ಎ ಅಡಿ ಅನುಮತಿ ಪಡೆಯದೆ, ಆರೋಪ ಪಟ್ಟಿಯಲ್ಲಿ ವೀರಯ್ಯ ಅವರನ್ನು ಆರೋಪಿಯನ್ನಾಗಿಸಲಾಗಿದೆ. 2023ರ ಸೆಪ್ಟೆಂಬರ್ನಲ್ಲಿ ಅನಾಮಿಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ 9 ತಿಂಗಳು ತನಿಖೆ ನಡೆಸಲಾಗಿದೆ. ಆನಂತರ ಪಿಸಿ ಕಾಯ್ದೆ ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಕೋರಿದ್ದು, ಮೊದಲ ಆರೋಪಿ ಶಂಕರಪ್ಪ ವಿರುದ್ಧ ಪೂರ್ವಾನುಮತಿ ದೊರೆತಿದೆ. ಆದರೆ, ವೀರಯ್ಯ ವಿಚಾರದಲ್ಲಿ ಯಾವುದೇ ಪ್ರಕ್ರಿಯೆ ಪಾಲಿಸಿಲ್ಲ” ಎಂದರು.
ವಾದ ಆಲಿಸಿದ ಪೀಠವು “ಅರ್ಜಿದಾರ ವೀರಯ್ಯ ಅವರ ವಿರುದ್ಧದ ಹೆಚ್ಚುವರಿ ತನಿಖೆ ಮತ್ತು ಈಗಾಗಲೇ ಸಲ್ಲಿಕೆ ಮಾಡಲಾಗಿರುವ ಆರೋಪ ಪಟ್ಟಿಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಆದೇಶಿಸಿತು. ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಿತು. ಜು. 25ರಂದು ವೀರಯ್ಯ ಅವರಿಗೆ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
ಏನಿದು ಪ್ರಕರಣ?
2021ರ ಅಕ್ಟೋಬರ್ 25ರಂದು ದೇವರಾಜ ಅರಸು ಟ್ರಕ್ ಟರ್ಮಿನಲ್ನಲ್ಲಿ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್ಗಳ ದುರಸ್ತಿ ಹಾಗೂ ನಿರ್ವಹಣೆಗೆ 10 ಕೋಟಿ ರೂ.ಗಳವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನಾ ನಿರ್ಣಯ ಮಾಡಲಾಗಿತ್ತು. ಆನಂತರ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನಿಗಮದ ಹಾಲಿ ಎಂಡಿ, ವಿಲ್ಸನ್ ಗಾರ್ಡನ್ ಠಾಣೆಗೆ ತುಂಡು ಗುತ್ತಿಗೆ ಕಾಮಗಾರಿಯಲ್ಲಿ 47.50 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಹೀಗಾಗಿ 2024ರ ಜುಲೈ 12ರಂದು ಡಿಡಿಯುಟಿಟಿಎಲ್ನ ಮಾಜಿ ಅಧ್ಯಕ್ಷ ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು.
2021-23ರ ಅವಧಿಯಲ್ಲಿ ಡಿಡಿಯುಟಿಟಿಎಲ್ ಹಣಕಾಸು ದುರ್ಬಳಕೆ ಹಗರಣ ನಡೆದಿತ್ತು. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಉಪನಿರ್ದೇಶಕ ಎಸ್.ಶಂಕರಪ್ಪ ಅವರನ್ನು ಮೊದಲಿಗೆ ಬಂಧಿಸಲಾಗಿತ್ತು. ಶಂಕರಪ್ಪ ಅವರು ಆಗ ಡಿಡಿಯುಟಿಟಿಎಲ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇದರ ಬೆನ್ನಿಗೇ 2024ರ ಜುಲೈ 12ರಂದು ಡಿಡಿಯುಟಿಟಿಎಲ್ನ ಮಾಜಿ ಅಧ್ಯಕ್ಷ ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ವೀರಯ್ಯ ಅವರು 2008ರಿಂದ 2018ರವರೆಗೆ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಈ ಸುದ್ದಿಯನ್ನೂ ಓದಿ | Electoral bonds: ಚುನಾವಣಾ ಬಾಂಡ್ ಅಕ್ರಮ; ನಿರ್ಮಲಾ ಸೀತಾರಾಮನ್, ವಿಜಯೇಂದ್ರ ಮತ್ತಿತರರ ವಿರುದ್ಧದ FIR ರದ್ದು