Monday, 6th January 2025

Daali Dhananjaya: ಹುಟ್ಟೂರಿನ ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿ ಮಾದರಿಯಾದ ನಟ!

Daali Dhananjaya

ಬೆಂಗಳೂರು: ಸಾಮಾನ್ಯವಾಗಿ ಮದುವೆ ಅಂದ ತಕ್ಷಣ ಮನೆ ಸರಿ ಮಾಡಿಸೋದು, ಮನೆಗೆ ಸುಣ್ಣ ಬಣ್ಣ ಮಾಡಿಸೋದು ಸರ್ವೇ ಸಾಮಾನ್ಯ. ಆದರೆ ನಟ ಡಾಲಿ ಧನಂಜಯ (Daali Dhananjaya) ಮಾತ್ರ ಈ ವಿಚಾರದಲ್ಲಿ ಸಖತ್‌ ಡಿಫ್ರೆಂಟ್‌. ಮದುವೆ ಫಿಕ್ಸ್‌ ಆಯ್ತು, ಡೇಟ್‌ ಕೂಡ ಕನ್ಫರ್ಮ್‌ ಆಯ್ತು ಇನ್ನೊಂದು ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಹೊತ್ತಲ್ಲಿ ತಾನು ಬೆಳೆದು ಬಂದ ತನ್ನೂರಿಗೆ ಮಾಡಬೇಕಾದ ಸೇವೆಯನ್ನು ಮಾತ್ರ ಮರೆತಿಲ್ಲ ಡಾಲಿ ಧನಂಜಯ.

ಕನ್ನಡ ಸಿನಿಮಾರಂಗದ ಕಲಾವಿದರ ಸಾಲಿನಲ್ಲಿ ವಿಶೇಷವಾಗಿ ನಿಲ್ಲುವ ನಟ ಡಾಲಿ ಧನಂಜಯ. ಈಗಿನ ಕಾಲದಲ್ಲಿ ಹುಟ್ಟೂರಿನಿಂದ ಎಲ್ಲಾ ಗೌರವ ಪಡೆದವರು ಅದೇ ಊರಿಗೆ ಬೇಕಾದನ್ನ ಮಾಡಲು ಮನಸ್ಸು ಮಾಡೋದಿಲ್ಲ. ಆದರೆ ನಟ ಡಾಲಿ ತಾವು ಹುಟ್ಟಿದ ಊರಿನ ಶಾಲೆಯಲ್ಲಿ ಓದದೇ ಇದ್ದರೂ ತವರೂರಿನ ಶಾಲೆಗೆ ಹೊಸ ರೂಪ ನೀಡುತ್ತಿದ್ದಾರೆ. ಅದು ತಮ್ಮ ಮದುವೆ ಸಂದರ್ಭದಲ್ಲಿ ಅನ್ನೋದು ವಿಶೇಷ.

ಫೆಬ್ರವರಿ 16 ರಂದು ನಟ ಡಾಲಿ ಧನಂಜಯ ಡಾಕ್ಟರ್‌ ಧನ್ಯತಾ ಜತೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ತಯಾರಿ ಶುರುವಾಗಿದೆ. ರಾಜಕೀಯ ಗಣ್ಯರು, ಮಠಾಧೀಶರಿಗೆ ಮದುವೆ ಆಹ್ವಾನ ಪತ್ರಿಕೆ ನೀಡುತ್ತಿರುವ ಡಾಲಿ ಈ ಮಧ್ಯೆ ತಮ್ಮ ಊರಿನ ಸರ್ಕಾರಿ ಶಾಲೆಗೆ ಹೊಸ ರೂಪ ನೀಡುವ ಸಂಕಲ್ಪ ಮಾಡಿದ್ದಾರೆ. ತಮ್ಮ ಮದುವೆಯ ಸಂದರ್ಭವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾದರಿ ಆಗುವ ಕೆಲಸ ಮಾಡುತ್ತಿದ್ದಾರೆ ಡಾಲಿ ಧನಂಜಯ.

ತಮ್ಮ ಊರಾದ ಕಾಳೇನಹಳ್ಳಿಯಲ್ಲಿ 1-7 ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಶಾಲೆಯಲ್ಲಿ ಹಾಲಿ 80 ಮಕ್ಕಳಿದ್ದಾರೆ. ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ. ಇಡೀ ಶಾಲೆಯ ನೆಲಕ್ಕೆ ಟೈಲ್ಸ್, ಬಣ್ಣಮಾಸಿದ ಶಾಲೆಯ ಎಲ್ಲ ಗೋಡೆಗಳಿಗೆ ಸಂಪೂರ್ಣ, ಬಿರುಕು ಬಿಟ್ಟಿದ್ದ ಗೋಡೆ, ಅಂತಸ್ತಿಗೆ ಚುರತಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯಕ್ಕೆ ಸುಸ್ಥಿತಿ, ಅಚ್ಚುಕಟ್ಟು ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ತನ್ನೂರಿನ ಶಾಲೆಗೆ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ.

ತಾವು ಈ ಶಾಲೆಯಲ್ಲಿ ಓದದೇ ಇದ್ದರೂ ಕೂಡ ತಮ್ಮೂರಿನ ಶಾಲೆ ಚೆನ್ನಾಗಿರಬೇಕು ಹಾಗೂ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಅನ್ನೋದು ಡಾಲಿಯವರ ಉದ್ದೇಶವಾಗಿದೆ. ಧನಂಜಯ ಅವರ ಈ ಕೆಲಸಕ್ಕೆ ಊರಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Daali Dhananjaya: ಸಿದ್ಧಗಂಗಾ ಶ್ರೀಗಳಿಗೆ ಮದುವೆ ಆಮಂತ್ರಣ ನೀಡಿ ಆಶೀರ್ವಾದ ಪಡೆದ ನಟ ಡಾಲಿ ಧನಂಜಯ

ಇದಕ್ಕಾಗಿ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತಿದ್ದು ನಟ ಡಾಲಿ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಶಾಲೆ ಬೇಕಿರೋ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಎಂದಿದ್ದಾರೆ. ತನ್ನೂರಿನ ಶಾಲೆ ಚೆನ್ನಾಗಿರಬೇಕು, ಹಾಜರಾತಿ ಹೆಚ್ಚಾಗಬೇಕು, ಸರ್ಕಾರಿ ಶಾಲೆಗಳು ಉಳಿಯಬೇಕು ಅನ್ನೋದಷ್ಟೇ ಉದ್ದೇಶ ಎಂದು ಡಾಲಿ ಧನಂಜಯ ತಿಳಿಸಿದ್ದಾರೆ.