Thursday, 19th September 2024

ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಶಾಸಕ ಮುನಿರತ್ನ ವಿರುದ್ದ ಅಣಕು ಶವಯಾತ್ರೆ

ಚಿಕ್ಕಬಳ್ಳಾಪುರ : ದಲಿತ ಸಂಘಟನೆಗಳ ಒಕ್ಕೂಟದಿಂದ ಒಕ್ಕೂಟದಿಂದ ಆರ್.ಆರ್.ನಗರ ಶಾಸಕ ಮುನಿರತ್ನರ ಶಾಸಕತ್ವವನ್ನು ಕೂಡಲೆ ರದ್ದು ಪಡಿಸಬೇಕೆಂದು ಒತ್ತಾಯಿಸಿ, ಅಣಕು ಶವಯಾತ್ರೆ ನಡೆಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.    

ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಸಿದ ಅಣುಕು ಶವಯಾತ್ರೆ ಹಾಗೂ ಪ್ರತಿಕೃತಿ ದಹನದ ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ, ಶಾಸಕ ಮುನಿರತ್ನ ಸಂವಿಧಾನಕ್ಕೆ ಬದ್ಧವಾಗಿ ಶಾಸಕರಾಗಿ ಆಯ್ಕೆಯಾದವರು. ಅದನ್ನು ಮರೆತು ಒಂದು ಜಾತಿಯ ಬಗ್ಗೆ ಅತೀ ಕೀಳು ಮಟ್ಟದ ಪದಬಳಕೆ ಮತ್ತು ಒಬ್ಬ ಹೆಣ್ಣನ್ನು ಕೇಳುವುದು ಸರಿಯಲ್ಲ.

ಹೀಗೆ ಮಾತನಾಡಲು ಈ ದೇಶ ಹುಚ್ಚರ ಸಂತೆಯಲ್ಲ. ನಿಮ್ಮ ಸ್ವಂತ ಆಸ್ತಿಯೂ ಅಲ್ಲ. ಇದೊಂದು ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವ. 75 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಿಮ್ಮ ಚುನಾವಣೆಯ ತೆವಲಿಗಾಗಿ ಏನೇನೋ ಬಾಯಿಗೆ ಬಂದ0ತೆ ಮಾತನಾಡಬಾರದು.ಅದರಲ್ಲೂ ಒಬ್ಬ ಜನಪ್ರತಿನಿಧಿ ಹೇಳುವುದು ಕೇವಲ ಜಾತಿನಿಂದನೆ ಮಾತ್ರವಲ್ಲ ಬದಲಿಗೆ ದೇಶದ್ರೋಹಕ್ಕೆ ಸಮ.ಈ ನಡೆ ಈ ಮಣ್ಣಿಗೆ ಇಲ್ಲಿನ ಮೌಲ್ಯಗಳ ಬೆನ್ನಿಗೆ ಚೂರಿ ಹಾಕಿದಂತೆ ಎಂದು ಕಿಡಿಕಾರಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗ ಹೆಚ್ಚು ಕ್ರಿಯಾತ್ಮಕವಾಗಿ, ಮೌಲ್ಯಯುತವಾಗಿ, ಸಂವಿ ಧಾನ ನಿಷ್ಠವಾಗಿ ಕೆಲಸ ಮಾಡಿದರೆ ಖಂಡಿತವಾಗಿಯೂ ಇನ್ನು ಹೆಚ್ಚು ಅಭಿವೃದ್ಧಿ ಸಾಧಿಸಿ ಜನರ ಜೀವನ ಮಟ್ಟ ಸುಧಾರಿಸಲು ಸಾಧ್ಯ. ಇಲ್ಲದೆ ಜಾತಿ ಧರ್ಮಗಳ ಅಮಲೇರಿಸಿಕೊಂಡು ಮತಾಂಧರಾಗಿ ಮಾತನಾಡಿದರೆ ಅದರ ಪರಿಣಾಮ ನಿಮ್ಮಂತದೇ ಜನರ ಪ್ರಚೋದನೆಗೆ ಒಳಗಾಗಿ ಹಿಂಸೆಗೆ ಇಳಿಯುತ್ತಾರೆ ಎಂಬ ಅರಿವಿದ್ದು ನೆಟ್ಟಗೆ ಮಾತ ನಾಡಿ ಎಂದು ತಾಕೀತು ಮಾಡಿದರು.

ಸಂವಿಧಾನದ ೧೯೨ ವಿಧಿಯಂತೆ ಯಾವುದೇ ಒಂದು ಜಾತಿಯ ಬಗ್ಗೆ ಅತೀ ಕೀಳು ಮಟ್ಟದಲ್ಲಿ ಮಾತನಾಡಬಾರದು. ಇದನ್ನು ಮೀರಿ ಮಾತನಾಡಿರುವ ಶಾಸಕರಾದ ಮುನಿರತ್ನ ಅವರ ಶಾಸಕತ್ವವನ್ನು ಕೂಡಲೇ ರದ್ದು ಪಡಿಸಲು ಅವಕಾಶವಿದೆ. ಇವರಿಗೆ ಮುಂದೆ ಯಾವುದೇ ರೀತಿಯ ಚುನಾವಣೆಗೆ ಅವಕಾಶ ಮಾಡಿಕೊಡಕೂಡದು, ಎಂದು ಸಂವಿದಾನದ ೧೨೩ನೆಯ ವಿಧಿಯ ಪ್ರಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ವಿಧಾನಸಭೆಯ ಸಭಾಪತಿಗಳನ್ನು ಒತ್ತಾಯಿಸಿದರು.

ಮುನಿರತ್ನ ವಿರುದ್ದ  ಕ್ರಮ ಜರುಗಿಸದಿದ್ದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ರಾಜ್ಯದ ಎಲ್ಲಾ ಭಾಗಗಳಿಂದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಮಾಡದೆ ಅನ್ಯಮಾರ್ಗವಿಲ್ಲ ಇದೇ ವೇಳೆ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಈಶ್ವರಪ್ಪ, ಜಿ.ಅಶ್ವಥರೆಡ್ಡಿ, ತ್ಯಾಗರಾಜ್, ಸೊಪ್ಪಹಳ್ಳಿ ಮೂರ್ತಿ, ಶ್ರೀಧರ್, ಶ್ರೀನಿವಾಸ್, ಮುನಿರಾಜು, ರಾಜೇಶ್, ಬಾಲು, ಪ್ರಕಾಶ್, ಅಭಿ, ಮಂಜುನಾಥ್, ಪವನ್, ಮುನಿರಾಜು, ಹರೀಶ್, ನಾಗೇಶ್ ಮತ್ತಿತರರು ಇದ್ದರು.

ಇದನ್ನೂ ಓದಿ: Munirathna : ಪೋಲೀಸ್‌ ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನಗೆ ಎದೆನೋವು, ಜಯದೇವ ಆಸ್ಪತ್ರೆಗೆ ದಾಖಲು