Wednesday, 30th October 2024

Darshan Thoogudeepa Bail : ಕಾಮಾಕ್ಯ ದೇವಿ ದೇಗುಲದ ಚಿತ್ರ ಹಾಕಿ ಕೃತಜ್ಞತೆ ಸಲ್ಲಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ

Darshan Thoogudeepa Bail

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ಷರತ್ತು ಬದ್ಧ ಮಧ್ಯಂತರ ಜಾಮೀನು ದೊರಕುತ್ತಿದ್ದಂತೆ (Darshan Thoogudeepa Bail) ಅವರ ಪತ್ನಿ ವಿಜಯಲಕ್ಷ್ಮೀ ಅವರು ಅಸ್ಸಾಂನ ವಿಶ್ವಪ್ರಸಿದ್ಧ ಕಾಮಾಕ್ಯ ದೇವಿ ದೇಗುಲದ ಚಿತ್ರವನ್ನ ಹಾಕಿ ಧನ್ಯವಾದ ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಹೈಕೋರ್ಟ್‌ ದರ್ಶನ್‌ಗೆ ಜಾಮೀನು ಮಂಜೂರು ಮಾಡಿತ್ತು. ಕ್ಷಣದಲ್ಲೇ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ದೇವಿಯ ದೇಗುಲದ ಚಿತ್ರವನ್ನು ಹಾಕಿ ಧನ್ಯವಾದ ಹೇಳಿದ್ದಾರೆ.

ದರ್ಶನ್‌ ಜೈಲು ಸೇರಿದ ಬಳಿಕ ಅವರ ಪತ್ನಿ ಹಲವಾರು ದೇವಾಲಯಗಳಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅಂತೆಯೇ ಅವರು ಅಸ್ಸಾಂನ ಕಾಮಾಕ್ಯಕ್ಕೂ ಭೇಟಿ ನೀಡಿದ್ದರು. ಈ ದೇವಿಯ ಕೃಪೆಯಿಂದ ಪತಿಗೆ ಬೇಲ್ ಸಿಕ್ಕಿದೆ ಎಂದು ಅವರು ನಂಬಿದ್ದಾರೆ.

ಈ ದೇವಾಲಯವು ಚಿತ್ರರಂಗದ ತಾರೆಯರು ಮತ್ತು ರಾಜಕಾರಣಿಗಳ ನೆಚ್ಚಿನ ದೇವಾಲಯವಾಗಿದೆ. ಕಾಮಾಕ್ಯ ಭಾರತದ ಪುರಾತನ ಶಕ್ತಿಪೀಠ. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ, ರಾಜಕಾರಣಿಗಳು ಸೇರಿ ಅನೇಕ ಗಣ್ಯ ವ್ಯಕ್ತಿಗಳು ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ಐಟಿ, ಸಿಬಿಐ, ಇಡಿ ಸಂಸ್ಥೆಗಳ ತನಿಖೆಯಿಂದ ಬೇಸತ್ತಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕುಟುಂಬ ಸಮೇತ 2020ರಲ್ಲಿ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಶಕ್ತಿ ದೇವತೆಯ ದೇವಾಲಯಕ್ಕೆ ಭೇಟಿ ನೀಡಿದ್ದರು.

ಸ್ಯಾಂಡಲ್‌ವುಡ್‌ ನಟ ಜಗ್ಗೇಶ್ , ನಟಿಯರಾದ ಕಾವ್ಯಶಾಸ್ತ್ರಿ, ಕಾವ್ಯಾ ಶೆಟ್ಟಿ, ರಾಗಿಣಿ ದ್ವಿವೇದಿ ಮತ್ತು ಇತ್ತೀಚೆಗೆ ನಿಶ್ವಿಕಾ ನಾಯ್ಡು ಕೂಡ ಭೇಟಿ ನೀಡಿದ್ದರು. ಮಾತ್ರವಲ್ಲ ಬಾಲಿವುಡ್‌ನ ಸಾರಾ ಅಲಿ ಖಾನ್‌ , ನಟಿ ರಾಜಕಾರಣಿ ಕಂಗನಾ ರಣಾವತ್‌, ಪ್ರೀತಿ ಝಿಂಟಾ, ಶಿಲ್ಪಾ ಶೆಟ್ಟಿ, ಊರ್ವಶಿ ರೌಟೇಲಾ , ಮಿಲ್ಕಿ ಬ್ಯೂಟಿ ತಮನ್ನಾ, ಮಲಯಾಳಂ ನಟಿ ಸಂಯುಕ್ತಾ ಮೆನನ್ ಸೇರಿ ಅನೇಕರು ಭೇಟಿ ನೀಡಿದ್ದರು.

ಈ ದೇವಾಲಯದಲ್ಲಿ ಮೂರ್ತಿಯೇ ಇಲ್ಲ

ಗುವಾಹಟಿ ನಗರದ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ಕಾಮಾಕ್ಷಿ ದೇವಿ ನೆಲಸಿದ್ದಾಳೆ. ಇಲ್ಲಿ ದೇವಿಯ ವಿಗ್ರಹವಿಲ್ಲ. ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಹತ್ತಿರದಲ್ಲಿ ಹರಿವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಮುಟ್ಟಾದ ಮೂರು ದಿನಗಳ ಕಾಲ ಈ ದೇವಾಲಯವನ್ನು ಬಂದ್ ಮಾಡಲಾಗುತ್ತದೆ.

ಭಕ್ತರಿಗೆ ಇಲ್ಲಿ ಕೆಂಪು ಬಣ್ಣದ ಬಟ್ಟೆಯೇ ಪ್ರಸಾದ. ದೇವಿ ಮುಟ್ಟಾದಾಗ ದೇವಾಲಯದಲ್ಲಿ ಬಿಳಿ ಬಟ್ಟೆಗಳನ್ನು ಹರಡಿ ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಮೂರು ದಿನಗಳ ನಂತರ ದೇವಾಲಯದ ಬಾಗಿಲು ತೆರೆದಾಗ, ಬಿಳಿ ಬಟ್ಟೆಯು ದೇವಿಯ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಬಟ್ಟೆಯನ್ನು ಅಂಬುವಾಚಿ ಬಟ್ಟೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : Actor Darshan: ಜಾಮೀನು ನೀಡಿದ ಹೈಕೋರ್ಟ್‌ ದರ್ಶನ್‌ಗೆ ವಿಧಿಸಿದ ಶರತ್ತುಗಳು ಏನೇನು?

ಈ ಕ್ಷೇತ್ರದ ಗರ್ಭಗುಡಿಯಲ್ಲಿರುವುದು ಶಕ್ತಿ ದೇವತೆಯ ಯೋನಿ ಇದೆಯೇ ಹೊರತು ಮೂರ್ತಿಯಲ್ಲ. ಸತಿಯ ದೇಹ 51 ಭಾಗಗಳಾಗಿ ದೇಶದ ಎಲ್ಲೆಡೆ  ವಿವಿಧ ಶಕ್ತಿಪೀಠಗಳಾದಾಗ ಇಲ್ಲಿ ಆಕೆಯ ಗರ್ಭ ಬಿದ್ದಿತು ಎಂಬ ಪ್ರತೀತಿ ಇದೆ.

ಈ ದೇವಾಲಯ ತಂತ್ರಮಂತ್ರಗಳಿಗೂ ಜನಪ್ರಿಯವಾಗಿದೆ. ಇಲ್ಲಿ ನೂರಾರು ಸಾಧುಗಳು, ಅಗೋರಿಗಳು ಮಾಟಮಂತ್ರ ಹೋಗಲಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ಇಲ್ಲಿ ಪ್ರಾಣಿ ಬಲಿ ಸಾಮಾನ್ಯ. ಆದರೆ ಇಲ್ಲಿ ಹೆಣ್ಣು ಪ್ರಾಣಿ ಬಲಿ ಕೊಡಬಾರದು.