ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನೆ (Ganesha Visarjan) ವೇಳೆ ಕಲ್ಲುತೂರಾಟ (Stone pelting) ನಡೆದು ಪೊಲೀಸರಿಗೆ ಗಾಯವಾದ ಘಟನೆ ದಾವಣಗೆರೆ (Davanagere news)ಯ ಬೇತೂರ ರಸ್ತೆಯಲ್ಲಿ ನಡೆದಿದೆ, ಘಟನೆಯಿಂದ ದಾವಣಗೆರೆ ಉದ್ವಿಗ್ನಗೊಂಡಿದ್ದು, ನಾಗಮಂಗಲ ಗಲಭೆಯ (Mandya violence) ನೆನಪು ಮಾಸುವ ಮುನ್ನವೇ ಇಲ್ಲಿ ನಡೆದ ಘಟನೆ ಆತಂಕ ಹೆಚ್ಚಿಸಿದೆ.
ಕಲ್ಲು ತೂರಾಟದಲ್ಲಿ ದಾವಣಗೆರೆಯ ಸರ್ಕಲ್ ಇನ್ಸ್ ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್ಸ್ ಸ್ಟೇಬಲ್ ರಘು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲ ಕಿಡಿಗೇಡಿಗಳು ಎಸೆದ ಕಲ್ಲು ಶಾಂತಯುತವಾಗಿದ್ದ ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳುವಂತೆ ಮಾಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರೇ ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಕಲ್ಲುತೂರಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸಿಸಿಟಿವಿ ದೃಶ್ಯ ಸಂಗ್ರಹಿಸಿ ಆರೋಪಿಗಳ ಪತ್ತೆಕಾರ್ಯ ನಡೆದಿದೆ. ಸದ್ಯ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನ ಪೊಲೀಸರು ಮುಚ್ಚಿಸಿದ್ದಾರೆ. ಶಾಂತಿ ಟಾಕೀಸ್ ರಸ್ತೆ ಹಾಗೂ ಎನ್ ಆರ್ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಉಮಾ ಪ್ರಶಾಂತ್, “ಬೇತೂರ ರಸ್ತೆ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ. ನಿಷೇಧಾಜ್ಞೆ ಜಾರಿ ಬಗ್ಗೆ ಡಿಸಿ ಜೊತೆ ಚರ್ಚೆ ನಡೆಸಲಾಗಿದೆ. ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣವಾಗಿದೆ. ನಿನ್ನೆ ಒಂದು ಕೋಮಿನವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇನ್ನೊಂದು ಕೋಮಿನವರು ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕಡೆಯವರಿಂದ ದೂರು ದಾಖಲಾಗಿದೆ, ಕ್ರಮ ಕೈಗೊಳ್ಳುತ್ತೇವೆ” ಎಂದರು.
ಇದನ್ನೂ ಓದಿ: Mandya violence: ನಾಗಮಂಗಲ ಗಲಭೆಯ ನಷ್ಟದ ಪ್ರಮಾಣ 2.66 ಕೋಟಿ ರೂ.; ವ್ಯಾಪಾರಿಗಳು ಅತಂತ್ರ