ಮಂಗಳೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರವಾದ ಧರ್ಮಸ್ಥಳದಲ್ಲಿ (Dharmasthala) ಲಕ್ಷಾಂತರ ಮಂದಿ ತೀರ್ಥಸ್ನಾನ ನಡೆಸುವ ನೇತ್ರಾವತಿಗೆ (Netravathi) ಬಂದು ಸೇರುವ ಉಪನದಿಯಲ್ಲಿ ರಾಶಿ ರಾಶಿ ಗೋವಿನ ತ್ಯಾಜ್ಯ (Cow Slaughter) ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಿಡಿಗೇಡಿಗಳನ್ನು ಅರೆಸ್ಟ್ ಮಾಡಲಾಗಿದೆ(Dharmasthala Cow Slaughter). ಮೃತ್ಯುಂಜಯ ಹೊಳೆಗೆ ಗೋಮಾಂಸದ ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯ ಪೊಲೀಸರು ಇದೀಗ ಮೊಹಮ್ಮದ್ ಇರ್ಷಾದ್ (28) ಹಾಗೂ ಮೊಹಮ್ಮದ್ ಅಜ್ಮಲ್ (30)ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗೋಹತ್ಯೆಯ ಬಳಿಕ ಗೋ ತ್ಯಾಜ್ಯಗಳನ್ನು ಮೂಟೆಗಳಲ್ಲಿ ತಂದು ಮೃತ್ಯುಂಜಯ ಹೊಳೆಗೆ ಎಸೆಯಲಾಗಿದ್ದು, ಚಾರ್ಮಡಿ ಗ್ರಾಮದ ಅನ್ನಾರ್ ಬಳಿ ನದಿಯಲ್ಲಿ 11ಕ್ಕೂ ಹೆಚ್ಚು ಮೂಟೆಗಳಲ್ಲಿ ಗೋ ತ್ಯಾಜ್ಯಗಳು ಪತ್ತೆಯಾಗಿತ್ತು. ಮೂಟೆಗಟ್ಟಲೆ ಗೋವಿನ ರುಂಡ, ಮುಂಡ, ಚರ್ಮ ಎಸೆದು ಪವಿತ್ರ ನದಿಯನ್ನು ಅಪವಿತ್ರಗೊಳಿಸುವ ಹುನ್ನಾರ ನಡೆದಿದೆ ಎಂದು ಭಜರಂಗದಳ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ್ಯುಂಜಯ ಹೊಳೆ ಪಶ್ಚಿಮಘಟ್ಟದಿಂದ ಹರಿದು ಧರ್ಮಸ್ಥಳದ ಬಳಿ ನೇತ್ರಾವತಿಯನ್ನು ಸೇರುತ್ತದೆ. ಪ್ರತಿನಿತ್ಯ ಸಾವಿರಾರು ಭಕ್ತರು ನೇತ್ರಾವತಿ ಸ್ನಾನ ಘಟ್ಟದಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ನಿತ್ಯ ಅಭಿಷೇಕಕ್ಕೂ ನೇತ್ರಾವತಿಯ ಪುಣ್ಯತೀರ್ಥವನ್ನು ಬಳಸಲಾಗುತ್ತದೆ. ಹೀಗಿರುವ ಕೋಟ್ಯಂತರ ಭಕ್ತರ ನಂಬಿಕೆಗೆ ಗೋ ಹಂತಕರು ಕೊಳ್ಳಿ ಇಟ್ಟಿದ್ದಾರೆ. ಈ ಹಿಂದೆಯೂ ಹಲವು ಬಾರಿ ಮೃತ್ಯುಂಜಯ ನದಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋವಿನ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಇದೀಗ ಒಮ್ಮಿಂದೊಮ್ಮೆಗೆ 11 ಮೂಟೆಗೂ ಹೆಚ್ಚಿನ ತ್ಯಾಜ್ಯ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಚಾರ್ಮಾಡಿ ಗ್ರಾಮದ ಹಲವು ಮನೆ ಹಾಗೂ ಕಾಡು ಪ್ರದೇಶಗಳಲ್ಲಿ ಅಕ್ರಮ ಗೋ ಹತ್ಯೆಯಾಗುತ್ತಿದೆ ಎಂಬ ಅನುಮಾನ ಇದರಿಂದ ಮೂಡಿದೆ. ಗೋ ಹತ್ಯೆ ಬಳಿಕ ತ್ಯಾಜ್ಯ ಮತ್ತು ಅವಶೇಷಗಳನ್ನೂ ಮೂಟೆ ಕಟ್ಟಿ ಎಸೆಯುತ್ತಿದ್ದಾರೆ. ಮೃತ್ಯುಂಜಯ ನದಿಯಲ್ಲಿ 11 ಮೂಟೆ ಗೋವಿನ ತ್ಯಾಜ್ಯ ಪತ್ತೆಯಾಗಿರುವ ಬೆನ್ನಲ್ಲೇ ಬಜರಂಗದಳ ಸಿಡಿದೆದ್ದಿದ್ದು, ಪರಮ ಪವಿತ್ರ ನೇತ್ರಾವತಿಯ ಪಾವಿತ್ರ್ಯತೆಗೆ ಧಕ್ಕೆ ತಂದವರ ವಿರುದ್ಧ ಸಮರ ಸಾರಿದೆ.
ಉದ್ದೇಶಪೂರ್ವಕವಾಗಿ ಪವಿತ್ರ ನದಿ ನೇತ್ರಾವತಿಯನ್ನು ಅಪವಿತ್ರಗೊಳಿಸಲಾಗುತ್ತಿದೆ. ವಾರದೊಳಗೆ ಆರೋಪಿಗಳನ್ನು ಬಂಧಿಸಬೇಕು. ಬಂಧನವಾಗದೇ ಇದ್ದಲ್ಲಿ ಜಿಲ್ಲೆಯ ಹಿಂದೂ ನಾಯಕರನ್ನು ಸೇರಿಸಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಧರ್ಮಸ್ಥಳ ಪೊಲೀಸರಿಗೆ ಬಜರಂಗದಳ ಎಚ್ಚರಿಕೆ ನೀಡಿದೆ. ಹಲವು ಬಾರಿ ದೂರು ನೀಡಿದರೂ ಧರ್ಮಸ್ಥಳ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಸಂಘಟನೆಗಳು ಕಿಡಿ ಕಾರಿವೆ.
ಈ ಸುದ್ದಿಯನ್ನೂ ಓದಿ: C T Ravi: ತೀರ್ಪು ಬರಲಿ, ಧರ್ಮಸ್ಥಳಕ್ಕೆ ನಾನೇ ಕರೆಯುವೆ: ಸಿ.ಟಿ.ರವಿ