Saturday, 14th December 2024

DK shivakumar : ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ಡಿ.ಕೆ. ಶಿವಕುಮಾರ್

DK shivakumar

ಸಕಲೇಶಪುರ: ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ನಂಬಿದ್ದೇನೆ. ಈ ಯೋಜನೆ ಬಗ್ಗೆ ಟೀಕೆ ಮಾಡಿದವರಿಗೆ ಮಾಧ್ಯಮಗಳ ಕ್ಯಾಮೆರಾಗಳೇ ಉತ್ತರ ನೀಡುತ್ತವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK shivakumar) ತಿಳಿಸಿದರು. ಸಕಲೇಶಪುರದ ದೊಡ್ಡನಗರದ ಡಿ.ಸಿ- 3 ಪಂಪ್ ಹೌಸ್ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಒಂದು ವಿಶಿಷ್ಟ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ಆಲಮಟ್ಟಿ ಯೋಜನೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಂಕುಸ್ಥಾಪನೆ ಮಾಡಿದ್ದರು. 2006ರಲ್ಲಿ ಅಬ್ದುಲ್ ಕಲಾಂ ಅವರು ಯೋಜನೆ ಉದ್ಘಾಟನೆ ಮಾಡಿದ್ದರು. ಆಲಮಟ್ಟಿ ಯೋಜನೆ ಜಾರಿ ನಂತರ ಎತ್ತಿನಹೊಳೆ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾಗಿದೆ. 2014 ಮಾರ್ಚ್ 5ರಂದು ಸಿಎಂ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈಗ ಅವರ ನೇತೃತ್ವದಲ್ಲಿ ಈ ಯೋಜನೆ ಉದ್ಘಾಟನೆಯಾಗುತ್ತಿದೆ. 10 ವರ್ಷಗಳು ಕಳೆದಿದ್ದು, ಬೇಕಾದಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದವು. ಎಲ್ಲವನ್ನೂ ಮೆಟ್ಟಿನಿಂತು ಯೋಜನೆ ಜಾರಿಯಾಗುತ್ತಿದೆ. ಈ ಯೋಜನೆಗೆ ಬೇರೆ ಸರ್ಕಾರಗಳು ಪ್ರಯತ್ನಿಸಿವೆ ಎಂದು ತಿಳಿಸಿದರು.

ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಈ ಯೋಜನೆಯನ್ನು ಪೂರ್ಣಗೊಳಿಸಲೇಬೇಕು ಎಂದು ತೀರ್ಮಾನ ಮಾಡಿ ಆದ್ಯತೆ ಮೇರೆಗೆ ಕೆಲಸ ಮಾಡಲಾಗಿದೆ. ಪರಿಣಾಮ ಪಶ್ಚಿಮ ಘಟ್ಟಗಳಿಂದ ಬಯಲುಸೀಮೆಯ ಪ್ರದೇಶಕ್ಕೆ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಈಗ 123 ಕಿ.ಮೀ ದೂರದ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಸೇರುತ್ತಿದೆ. ಈ ಯೋಜನೆಯ ಕಾಲುವೆ ಹಾದು ಹೋಗುವ ಮಧ್ಯ ಭಾಗಗಳಲ್ಲಿ ಅರಣ್ಯ ಪ್ರದೇಶದಲ್ಲಿ ಒಂದಷ್ಟು ಕೆಲಸ ಬಾಕಿ ಇವೆ. ಕೆಲವೇ ತಿಂಗಳುಗಳಲ್ಲಿ ಆ ಕೆಲಸಗಳು ಪೂರ್ಣಗೊಳ್ಳಲಿದ್ದು, ನಂತರ ತುಮಕೂರಿಗೆ ಈ ನೀರನ್ನು ತೆಗೆದುಕೊಂಡು ಹೋಗಲಾಗುವುದು ಎಂದು ವಿವರಿಸಿದರು.

ಹೊಸ ಕಾನೂನು ಜಾರಿ

ಮಾರ್ಗ ಮಧ್ಯೆ ನೀರನ್ನು ಪೋಲು ಮಾಡಬಾರದು ಎಂದು ಹೊಸ ಕಾನೂನು ತರಲಾಗಿದೆ. ಈ ಯೋಜನೆಗೆ ಒಟ್ಟು ₹23 ಸಾವಿರ ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಈ ಯೋಜನೆಯಲ್ಲಿ 8 ವಿಯರ್ ಗಳ ಮೂಲಕ ನೀರನ್ನು ಎತ್ತಿ ಹರಿಸಲಾಗುವುದು. ಶುಕ್ರವಾರ 1,500 ಕ್ಯೂಸೆಕ್ ನೀರನ್ನು ಹರಿಸಲಾಗುವುದು. ಆಮೂಲಕ ಗೌರಿ ಹಬ್ಬದ ದಿನ ಗಂಗೆಗೂ ಪೂಜೆ ಮಾಡಲಾಗುವುದು. ಇಬ್ಬರೂ ದೇವತೆಗಳನ್ನು ಒಟ್ಟಾಗಿ ಪೂಜಿಸುತ್ತಿದ್ದೇವೆ ಎಂದು ತಿಳಿಸಿದರು.

“ಈ ಯೋಜನೆ ಕುರಿತಾಗಿ ಅನೇಕ ನಾಯಕರು ಸದನ ಹಾಗೂ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲಾ ಪಕ್ಷದ ನಾಯಕರನ್ನು ಆಹ್ವಾನಿಸುತ್ತಿದ್ದೇವೆ. ರಾಜ್ಯದ 224 ಕ್ಷೇತ್ರದವರಿಗೂ ಆಹ್ವಾನ ನೀಡಲು ಆಗುವುದಿಲ್ಲ. ಆದರೆ ಫಲಾನುಭವಿ ಜಿಲ್ಲೆಗಳ ನಾಯಕರಿಗೆ ಆಹ್ವಾನ ನೀಡಿದ್ದೇವೆ. ಯಾರನ್ನಾದರೂ ಆಹ್ವಾನಿಸದೇ ತಪ್ಪಾಗಿದ್ದರೆ ಮುಂದೆ ಸರಿಪಡಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಶುಭ ಗಳಿಗೆಯಲ್ಲಿ ಒಳ್ಳೆಯ ಮಾತುಗಳನ್ನು ಮಾತನಾಡೋಣ

ಈ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂದು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದರು ಎಂದು ಕೇಳಿದಾಗ, “ಬಿಜೆಪಿಯವರ ಟೀಕೆಗೆ ನಾನು ಈಗ ಉತ್ತರ ನೀಡುವುದಿಲ್ಲ. ನಿಮ್ಮ ಕ್ಯಾಮೆರಾಗಳೇ ಅವರಿಗೆ ಉತ್ತರ ನೀಡುತ್ತವೆ. ಅವರಿಗೆ ಅಧಿವೇಶನದಲ್ಲಿ ಉತ್ತರ ನೀಡುತ್ತೇನೆ. ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ವಿಘ್ನಗಳ ನಿವಾರಕ ವಿನಾಯಕನನ್ನು ಪ್ರಾರ್ಥಿಸುತ್ತೇನೆ. ಈ ಶುಭ ಸಂದರ್ಭದಲ್ಲಿ ಒಳ್ಳೆಯ ವಿಚಾರಗಳನ್ನಷ್ಟೇ ಮಾತನಾಡೋಣ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ವಚನದಂತೆ ನಮ್ಮ ಮಾತುಗಳು ಉತ್ತಮವಾಗಿರಲಿ. ಶುಭ ಸಂದರ್ಭದಲ್ಲಿ ಅಶುಭದ ಮಾತುಗಳು ಬೇಡ” ಎಂದು ತಿಳಿಸಿದರು.

ಇದನ್ನೂ ಓದಿ: Muda Scam: ಮುಡಾದಲ್ಲಿ ಮತ್ತೊಂದು ಹಗರಣ; ವೃದ್ಧ ದಂಪತಿಗೆ ವಂಚಿಸಿ 5.14 ಎಕರೆ ಭೂಮಿ ಸ್ವಾಧೀನ!

ಈ ಯೋಜನೆಯಲ್ಲಿ ನಿರೀಕ್ಷಿತ ಮಟ್ಟದ ನೀರು ಸಿಗುವುದೇ ಎಂದು ಕೇಳಿದಾಗ, “ಕೆಲವರಲ್ಲಿ ಇಂತಹ ಅನುಮಾನವಿದೆ. ಈ ನೀರು ಸಾಕಾಗದೆ ಹೋದರೆ ಎಂಬ ಆತಂಕವಿದೆ. ನಾವು ಕುಡಿಯುವ ಉದ್ದೇಶಕ್ಕೆ 14 ಟಿಎಂಸಿ ಹಾಗೂ ಕೆರೆಗಳ ತುಂಬಿಸಲು ಸುಮಾರು 10 ಟಿಎಂಸಿ. ಒಟ್ಟು 24 ಟಿಎಂಸಿ ನೀರನ್ನು ತೆಗೆಯುವ ಗುರಿ ಇದೆ. ಈಗಾಗಲೇ ಪ್ರಯೋಗಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದೆ” ಎಂದು ತಿಳಿಸಿದರು.

24 ಟಿಎಂಸಿ ನೀರನ್ನು ಎತ್ತಲು ಸಾಧ್ಯವೇ ಎಂದು ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ಈಗ ಬೇರೆಯವರ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ಟೀಕೆ ಮಾಡುವವರು ಅಧಿಕಾರದಲ್ಲಿ ಇದ್ದಾಗ ಯಾವುದನ್ನೂ ಮಾತನಾಡಲಿಲ್ಲ. ಈ ವರ್ಷ ಈಗಾಗಲೇ 15 ಟಿಎಂಸಿ ನೀರನ್ನು ಎತ್ತಲಾಗಿದೆ. ಡಿಸೆಂಬರ್ ವೇಳೆಗೆ ತುಮಕೂರು ಗಡಿವರೆಗೂ 5 ಟಿಎಂಸಿ ನೀರನ್ನು ಹರಿಸಲು ಗುರಿ ಹೊಂದಿದ್ದೇವೆ. ನಮ್ಮ ಇಲಾಖೆಯಲ್ಲಿ ಅತ್ಯುತ್ತಮ ಅಧಿಕಾರಿಗಳು ಇದ್ದಾರೆ” ಎಂದು ತಿಳಿಸಿದರು.

ಹೋಮ ಹವನ ಮಾಡಲಾಗುವುದೇ ಎಂದು ಕೇಳಿದಾಗ, “ಹೋಮ ಹವನ ಮಾಡಬೇಕು, ಕುಂಬಳಕಾಯಿ ಬಲಿ ನೀಡಬೇಕು. ದೇವರಲ್ಲಿ ಪ್ರಾರ್ಥನೆ ಮಾಡಿ ಯೋಜನೆಗೆ ಚಾಲನೆ ನೀಡಬೇಕು. ನಮ್ಮ ಧರ್ಮ, ಸಂಸ್ಕೃತಿ ಕಾಪಾಡಬೇಕು. ಗಂಗೆ ಪೂಜೆ, ಬಾಗಿನ ಅರ್ಪಣೆ ಎಲ್ಲವೂ ನಮ್ಮ ಧರ್ಮ, ಸಂಸ್ಕೃತಿಯ ಭಾಗವಲ್ಲವೇ” ಎಂದು ತಿಳಿಸಿದರು.