ಬೆಳಗಾವಿ: ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು, ನಮ್ಮ ಮೆಟ್ರೋ (Namma Metro) ಮಾರ್ಗವನ್ನು ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿವರೆಗೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.
ವಿಧಾನಸಭೆಯ ಕಲಾಪದಲ್ಲಿ ಗುರುವಾರ ಕಾಂಗ್ರೆಸ್ ಶಾಸಕ ಶರತ್ ಬಚ್ಛೆಗೌಡ ಅವರು ಹೊಸಕೋಟೆಗೆ ಮೆಟ್ರೋ ಮಾರ್ಗ ವಿಸ್ತರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಬೆಂಗಳೂರಿನ ಕಸ ಮಾಫಿಯಾ ಮಟ್ಟ ಹಾಕುತ್ತೇವೆ; ಡಿ.ಕೆ. ಶಿವಕುಮಾರ್ ಘೋಷಣೆ
ಈ ವಿಚಾರವಾಗಿ ಶರತ್ ಅವರು ಬಹಳ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರು ಕೂಡ ವಿಪರೀತವಾಗಿ ಬೆಳೆಯುತ್ತಿದೆ. ಸಾಮಾನ್ಯ ರೈಲಿನಲ್ಲಿ ಕೋಲಾರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ದಿನ ನಿತ್ಯ ಸಂಚರಿಸುತ್ತಾರೆ. ಐಟಿ ಕಾರಿಡಾರ್ ಬಹುತೇಕ ಹೊಸಕೋಟೆ ಮುಟ್ಟಿದೆ. ಹೀಗಾಗಿ ಮೆಟ್ರೋ ಅವಶ್ಯಕತೆ ಇದೆ ಎಂದು ತಿಳಿಸಿದರು.