Monday, 23rd December 2024

DK Shivakumar: ಬಿಜೆಪಿಯವರ ಪ್ರತಿಭಟನೆಗೆ ನಾನು ಹೆದರುವುದಿಲ್ಲ ಎಂದ ಡಿ.ಕೆ. ಶಿವಕುಮಾರ್

DK Shivakumar

ಬೆಳಗಾವಿ: ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ. ಈ ಡಿ.ಕೆ. ಶಿವಕುಮಾರ್ ಇನ್ನೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದಾನೆ. ಬಿಜೆಪಿಯವರ ಪ್ರತಿಭಟನೆಗೆ ನಾನು ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸವಾಲೆಸೆದರು. ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ವೇಳೆ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದ್ದಾರೆ. ಇದೆಲ್ಲವೂ ಅವರ ನೇತೃತ್ವದ ಹೋರಾಟದ ಫಲ. ಇದೆಲ್ಲವನ್ನು ಉಳಿಸಿಕೊಂಡು ಸರಿಯಾದ ರೀತಿಯಲ್ಲಿ ಜಾರಿಯಲ್ಲಿಡಬೇಕು. ಗಾಂಧೀಜಿ ಅವರನ್ನು ದಿನನಿತ್ಯ ನೆನೆಯಬೇಕು ಎಂಬ ಕಾರಣಕ್ಕೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಣ ಮಾಡಲಾಗಿದೆ. ಮಹಾತ್ಮ ಎಂಬ ಹೆಸರು ಪಡೆದ ನಾಯಕನ ಸ್ಮರಣೆ ಮಾಡುವ ಆಚರಣೆ ವೇಳೆ ಪ್ರತಿಭಟನೆ ಮಾಡುತ್ತೇವೆ ಎಂದರೆ ನಾವು ಹೆದರುತ್ತೇವಾ? ಎಂದರು.

ಈ ಸುದ್ದಿಯನ್ನೂ ಓದಿ | Stock Market: ಚೇತರಿಸಿಕೊಂಡ ಷೇರುಪೇಟೆ- ಸೆನ್ಸೆಕ್ಸ್‌ನಲ್ಲಿ 507.18 ಅಂಕ ಜಂಪ್‌

ಸಿ.ಟಿ ರವಿ ಅವರನ್ನು ಫೇಕ್ ಎನ್ ಕೌಂಟರ್ ಮಾಡುವ ಹುನ್ನಾರ ನಡೆದಿತ್ತು ಎಂಬ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನಾನು ಜೋಷಿ ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಅದಕ್ಕೆ ಗೃಹಸಚಿವರು, ಪೊಲೀಸರು ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

ನೀವು ಬಲಿಷ್ಠರಾಗಿದ್ದಷ್ಟು ಹೆಚ್ಚು ಶತ್ರುಗಳು

ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಕಾರಣ ಎಂಬ ರೀತಿ ಬಿಂಬಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀವು ಬಲಿಷ್ಠರಾಗಿದ್ದಷ್ಟು ಹೆಚ್ಚು ಶತ್ರುಗಳು. ನೀವು ಕಡಿಮೆ ಶಕ್ತಿಶಾಲಿಯಾದರೆ ಕಡಿಮೆ ಶತ್ರುಗಳು, ನೀವು ದುರ್ಬಲರಾಗಿದ್ದರೆ ಯಾವುದೇ ಶತ್ರುಗಳಿರುವುದಿಲ್ಲ. ಹೆಚ್ಚು ಕೆಲಸ ಮಾಡಿದಷ್ಟು ಹೆಚ್ಚು ತಪ್ಪುಗಳು, ಕಡಿಮೆ ಕೆಲಸ ಮಾಡಿದಷ್ಟು ಕಡಿಮೆ ತಪ್ಪುಗಳು, ಕೆಲಸಗಳೇ ಮಾಡದಿದ್ದರೆ ತಪ್ಪುಗಳೇ ಇರುವುದಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | DHL QR CODE: ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡೋ ಮುನ್ನ ಎಚ್ಚರ…ಎಚ್ಚರ…! ಸ್ವಲ್ಪ ಯಾಮಾರಿದ್ರೂ ನಿಮ್ಮ ಹಣ ಮಂಗಮಾಯ

ಸರ್ಕಾರಕ್ಕೆ ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, ಕುಮಾರಸ್ವಾಮಿ ಬಗ್ಗೆ ಚನ್ನಪಟ್ಟಣದಲ್ಲಿ ಪ್ರತ್ಯೇಕವಾಗಿ ಮಾತನಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.