ಬೆಂಗಳೂರು: ವಿಕಲಚೇತನತೆ ವರವೂ ಅಲ್ಲ, ಶಾಪವೂ ಅಲ್ಲ. ದೇವರು ನಿಮಗೆ ಜೀವನದಲ್ಲಿ ನೀಡಿರುವ ಪರೀಕ್ಷೆ. ಇದನ್ನು ಮೆಟ್ಟಿನಿಂತ ಅನೇಕರು ಸಾಧನೆ ಮಾಡಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ನೀವೂ ಇದನ್ನು ಅನುಸರಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) , ವಿಕಲಚೇತನರಿಗೆ ಕಿವಿಮಾತು ಹೇಳಿದರು. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ವಿಕಲಚೇತನರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿಮ್ಮನ್ನು ದೇವರ ಮಕ್ಕಳು ಎಂದು ಕರೆದರು. ನಿಮಗೆ ಗಣಪತಿಯೇ ಸ್ಫೂರ್ತಿ. ಆನೆ ತಲೆ, ಮುರಿದ ಒಂದು ದಂತವಿದ್ದರೂ ಆತನನ್ನು ವಿಘ್ನವನ್ನು ನಿವಾರಿಸುವ ನಾಯಕ ವಿನಾಯಕ ಎಂದು ಪೂಜಿಸುತ್ತೇವೆ. ಹೀಗಾಗಿ ನಿಮ್ಮಿಂದ ಏನೂ ಮಾಡಲು ಆಗುವುದಿಲ್ಲಎಂದು ಭಾವಿಸಬೇಡಿ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Air India Flight: ಅಂಡಮಾನ್- ನಿಕೋಬಾರ್ ಪ್ರವಾಸಕ್ಕೆ ಹೋಗುವವರಿಗೆ ಸಿಹಿ ಸುದ್ದಿ
ನಿಮ್ಮಲ್ಲಿ ಮನೋಬಲ ಹೆಚ್ಚಾಗಿರಬೇಕು. ನಿಮ್ಮಲ್ಲಿ ಎಲ್ಲಾ ರೀತಿಯ ಸಾಧನೆ ಮಾಡುವ ಶಕ್ತಿ ಇದೆ. ನಿಮ್ಮ ಸಾಧನೆಯಲ್ಲಿ ಯಾವುದೇ ರೀತಿಯ ರಾಜಿ ಬೇಡ. ಪುಟ್ಟರಾಜ ಗವಾಯಿ, ಪಂಚಾಕ್ಷರಿ ಗವಾಯಿ ಅವರು ಸೇರಿದಂತೆ ಅನೇಕ ಸಾಧಕರು ನಮಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಮಗೆ ನಿರೀಕ್ಷಿತ ಮಟ್ಟದಲ್ಲಿ ಪದಕ ಬರಲಿಲ್ಲ. ಆದರೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ 29 ಪದಕ ಬಂದಿದೆ. ಇವರೆಲ್ಲರೂ ತಮಗಿರುವ ಅಡೆತಡೆ ಮರೆತು ಸಾಧನೆ ಮಾಡಿ ಇತಿಹಾಸ ಪುಟ ಸೇರಿದ್ದಾರೆ ಎಂದು ತಿಳಿಸಿದರು.
ವಿಕಲಚೇತನರಾಗಿದ್ದರೂ ಐಎಎಸ್ ಅಧಿಕಾರಿಯಾಗಿ, ಕ್ರೀಡಾಪಟು, ಚಿತ್ರಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ನಿಮ್ಮ ಬದುಕಿನಲ್ಲಿ ಬೆಳಕು ತರಬೇಕು ಎಂದು ಪ್ರತ್ಯೇಕ ಇಲಾಖೆ ಇಟ್ಟು ಸೇವೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಜ್ಯೋತಿಯನ್ನು ನಿಮ್ಮಿಂದಲೇ ಹಚ್ಚಿಸಿದ್ದೇವೆ. ನೀವು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ನಿಮ್ಮ ಸರ್ಕಾರ ಸದಾ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಪರವಾಗಿ ಕಾರ್ಯಕ್ರಮ ಜಾರಿ ಮಾಡಿ, ನಿಮ್ಮ ಭಾವನೆಗೆ ಸ್ಪಂದಿಸಲಿದೆ. ನಿಮ್ಮ ಜತೆ ಕೆಲಸ ಮಾಡಲು ನಾವು ಸಿದ್ಧರಾಗಿದ್ದೇವೆ. ಭಗವಂತ ನಿಮಗೆ ಒಳ್ಳೆಯದು ಮಾಡಲಿ, ಆತ್ಮಧೈರ್ಯ ತುಂಬಲಿ. ನೀವು ಯಾರಿಗೂ ಕಮ್ಮಿ ಇಲ್ಲ. ಎಲ್ಲರಂತೆ ನೀವು ಸರಿಸಮಾನರು. ನಿಮ್ಮ ಶಕ್ತಿ ಸಾಮರ್ಥ್ಯ ಸಾಬೀತುಪಡಿಸುವ ಧೈರ್ಯ ನಿಮ್ಮದಾಗಲಿ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಬೇರೆಯವರ ಜತೆ ಸೇರಿಕೊಳ್ಳುವುದಿಲ್ಲ
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಹಾಸನದಲ್ಲಿ ಜನಕಲ್ಯಾಣ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಸುಧೀರ್ಘ ಇತಿಹಾಸ ಹೊಂದಿರುವ ದೊಡ್ಡ ಪಕ್ಷ. ಕಾಂಗ್ರೆಸ್ ಪಕ್ಷದ ಜತೆ ಯಾವುದೇ ಸಂಘ ಸಂಸ್ಥೆಗಳು ಸೇರಿಕೊಳ್ಳಬಹುದು. ಆದರೆ ಕಾಂಗ್ರೆಸ್ ಬೇರೆಯವರ ಜತೆ ಸೇರಿಕೊಳ್ಳುವುದಿಲ್ಲ. ನಾನು ಈ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಭಾಗವಹಿಸುತ್ತಿದ್ದೇನೆ. ನಮ್ಮ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರಾಗಿ ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ನಮ್ಮ ನೇತೃತ್ವದಲ್ಲೇ ಸಮಾವೇಶ ನಡೆಯಲಿದೆ. ನಮ್ಮ ಸರ್ಕಾರದಿಂದ ಆಗಿರುವ ಅಭಿವೃದ್ಧಿ ಸಾಧನೆಗಳು ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸುಳ್ಳುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಸಮಾವೇಶ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ಡಿ.8ರಂದು ಹರಿವು ಬುಕ್ಸ್‌ನ ಎರಡು ಪುಸ್ತಕಗಳ ಬಿಡುಗಡೆ
ಇಲ್ಲಿ ಯಾರೂ ಶಿವಕುಮಾರ್ ಬೆಂಬಲಿಗರು, ಸಿದ್ದರಾಮಯ್ಯ ಬೆಂಬಲಿಗರಿಲ್ಲ
ಈ ತೀರ್ಮಾನದಿಂದ ಸಿದ್ದರಾಮಯ್ಯ ಅವರ ನಿಷ್ಠರಿಗೆ ಅಸಮಾಧಾನವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಇಲ್ಲಿ ಯಾರೂ ಶಿವಕುಮಾರ್ ಬೆಂಬಲಿಗರು, ಸಿದ್ದರಾಮಯ್ಯ ಬೆಂಬಲಿಗರಿಲ್ಲ. ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಗರು ಎಂದು ಅವರು ತಿಳಿಸಿದರು.