ತುಮಕೂರು: ರಾಜ್ಯದ ಜನರು ಪ್ರತಿಪಕ್ಷಗಳ ಸುಳ್ಳುಗಳಿಗೆ ಕಿವಿಗೊಡಬೇಡಿ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (Guarantee Schemes) ಯಶಸ್ವಿಯಾಗಿ ಜಾರಿ ಮಾಡಿದೆ. ಜತೆಗೆ ಅಭಿವೃದ್ಧಿ ಕೆಲಸಗಳಿಗೂ ಒತ್ತು ಕೊಟ್ಟಿದೆ. ಇದಕ್ಕೆ ರಾಜ್ಯದ ಜನರೇ ಸಾಕ್ಷಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ತುಮಕೂರಿನಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಅನವಶ್ಯಕ ಚರ್ಚೆ ಮಾಡುತ್ತಿದ್ದಾರೆ. ಸುಮಾರು 250 ಕೋಟಿಯಷ್ಟು ಹಣ ಗ್ಯಾರಂಟಿ ಯೋಜನೆಗಳ ಮೂಲಕ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ತಲುಪುತ್ತಿದೆ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣವಾಗುತ್ತಿದೆ. ಇದು ಅಭಿವೃದ್ದಿಯಲ್ಲವೇ ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಕ್ರಿಕೆಟ್ ಆಡಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ
ಎತ್ತಿನಹೊಳೆ ಅಡೆತಡೆ ನಿವಾರಣೆ
ತುಮಕೂರು ಜಿಲ್ಲೆಯ ಲಂಬಾಣಿ ಜನಾಂಗಗಳಿಗೆ 94ಡಿ ಅಡಿಯಲ್ಲಿ ಅವರು ವಾಸವಿರುವ ಜಮೀನುಗಳನ್ನು ಸಕ್ರಮ ಮಾಡಿ, ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವನ್ನು ಕೈಗೂಡಿಸಿದೆ. ಈಗಾಗಲೇ ಎತ್ತಿನಹೊಳೆ ಯೋಜನೆಗೆ ನಮ್ಮ ಸರ್ಕಾರ ಉದ್ಘಾಟಿಸಿದೆ. ಮಧ್ಯದಲ್ಲಿ ಒಂದಷ್ಟು ಅಡೆತಡೆಗಳಿದ್ದು ಅದನ್ನು ಆದಷ್ಟು ಬೇಗ ನಿವಾರಿಸಿ ತುಮಕೂರು ಜಿಲ್ಲೆಗೆ ನೀರು ಕೊಡುತ್ತೇವೆ ಎಂದರು.
ಗ್ಯಾರಂಟಿ ಯೋಜನೆಗಳು ಬಿಜೆಪಿಯಿಂದ ನಕಲು
ಜನರ ಬದುಕಿಗಾಗಿ ಐದು ಗ್ಯಾರಂಟಿ ಯೋಜನೆಗಳ ಮೂಲಕ 56 ಸಾವಿರ ಕೋಟಿ ಹಣವನ್ನು ವಿನಿಯೋಗ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಶಕ್ತಿ ಇಡೀ ದೇಶಕ್ಕೆ ಪರಿಚಿತವಾಗಿದೆ. ದೇಶದ ಒಂದಷ್ಟು ರಾಜ್ಯಗಳಲ್ಲಿ ಇರುವ ಬಿಜೆಪಿ ರಾಜ್ಯ ಸರ್ಕಾರಗಳು ನಮ್ಮ ಯೋಜನೆಗಳನ್ನು ನಕಲು ಮಾಡಿ ಜಾರಿಗೆ ತರುತ್ತಿರುವುದು ಸಂತೋಷದ ಸಮಾಚಾರ ಎಂದರು.
ನರೇಗಾ ಕಾಂಗ್ರೆಸ್ ಕೊಡುಗೆ
ನಾನು ಮತ್ತು ಮುಖ್ಯಮಂತ್ರಿಗಳು ಫಲಾನುಭವಿಗಳ ಜತೆ ಮಾತನಾಡುವಾಗ ಒಬ್ಬ ಪಂಚಾಯಿತಿ ಸದಸ್ಯನು ʼನನ್ನ ಕ್ಷೇತ್ರದಲ್ಲಿ ಸುಮಾರು 5 ಕೋಟಿ ಮೊತ್ತದ ನರೇಗಾ ಕೆಲಸಗಳನ್ನು ಮಾಡಿಸಿದ್ದೇನೆʼ ಎಂದು ಹೇಳಿದ. ಈ ನರೇಗಾ ಯೋಜನೆ ನಮ್ಮ ಕಾಂಗ್ರೆಸ್ ಕೊಡುಗೆ. ಗ್ಯಾರಂಟಿ ಯೋಜನೆಗಳಿಂದ ಮನೆಗಳನ್ನು ಕಾಂಗ್ರೆಸ್ ಇಬ್ಬಾಗ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿದ್ದವು. ಅದಕ್ಕೆಲ್ಲ ಉತ್ತರ ಸಿಕ್ಕಿದೆ, ಸಿಗಲಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Karnataka Rain: ಬಿರುಗಾಳಿ ಸಹಿತ ಭಾರಿ ಮಳೆ; ನಾಳೆ ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಮೀನುಗಾರರಿಗೆ ಎಚ್ಚರಿಕೆ!
ಅಭಿವೃದ್ದಿಗೆ ಜನರ ಕಣ್ಣುಗಳೇ ಸಾಕ್ಷಿ
ಯಾರು ಎಷ್ಟೇ ಸುಳ್ಳು ಹೇಳಬಹುದು ಆದರೆ ನಮ್ಮ ಅಭಿವೃದ್ದಿ ಕೆಲಸಗಳಿಗೆ ರಾಜ್ಯದ ಜನರ ಕಣ್ಣುಗಳೇ ಸಾಕ್ಷಿ ಎಂದು ಹೇಳಿದರು.
ಜನರ ನೆರವಿಗೆ ಕಾಂಗ್ರೆಸ್ ನಿಂತಿದೆ
ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇಂದಿರಾ ಗಾಂಧಿ ಅವರ ಕಾಲದಿಂದಲೂ ಅನೇಕ ಜನಪರ ಯೋಜನೆಗಳನ್ನು ನಾವು ನೀಡುತ್ತಾ ಬಂದಿದ್ದೇವೆ. ಉಳುವವನೇ ಭೂಮಿಯ ಒಡೆಯ, ಪಿಂಚಣಿ, ಪಡಿತರ ವ್ಯವಸ್ಥೆ, ಬಿಸಿಯೂಟ, ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಜನರ ನೆರವಿಗೆ ನಿಂತಿದ್ದೇವೆ ಎಂದರು.
ಬೆಂಗಳೂರಿಗೆ ಪರ್ಯಾಯ ತುಮಕೂರು
ಬೆಂಗಳೂರು ನಂತರ ಹಾಗೂ ಅದಕ್ಕೆ ಪರ್ಯಾಯವಾಗಿ ಬೆಳೆಯುವಂತಹ ಲಕ್ಷಣಗಳು ತುಮಕೂರು ಜಿಲ್ಲೆಗಿದೆ ಎನ್ನುವ ಅಭಿಪ್ರಾಯವನ್ನು ಜಿ.ಪರಮೇಶ್ವರ್ ಅವರು ವ್ಯಕ್ತಪಡಿಸಿದ್ದಾರೆ. ನನಗೂ ಈ ಜಿಲ್ಲೆಗೂ ಆಧ್ಯಾತ್ಮಿಕವಾದ ಸಂಬಂಧವಿದೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಈ ಜಿಲ್ಲೆ ಶ್ರೀಮಂತವಾಗಿದೆ. ತುಮಕೂರು ಜಿಲ್ಲೆಯ ಎಲ್ಲಾ ಶಾಸಕರನ್ನು ಗೃಹಸಚಿವರಾದ ಪರಮೇಶ್ವರ್ ಅವರು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರಿನಿಂದ 70 ಕಿ.ಮೀ ದೂರವಿರುವ ಜಿಲ್ಲೆಯನ್ನು ಪರಮೇಶ್ವರ್ ಅವರು ಅಭಿವೃದ್ದಿ ಪಥದಲ್ಲಿ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಡಿ.5ರಂದು ಸ್ವಾಭಿಮಾನಿ ಸಮಾವೇಶ
ರಾಜ್ಯದಲ್ಲಿ 136, ತುಮಕೂರು ಜಿಲ್ಲೆಯಿಂದ 7 ಶಾಸಕರನ್ನು ಕೊಟ್ಟು ನಮ್ಮ ಕೈ ಬಲ ಪಡಿಸಿದ್ದೀರಿ. ಈಗ ಮತ್ತೆ ಎರಡು ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಿಸಿ 138 ಕ್ಕೆ ನಮ್ಮ ಬಲ ಏರಿಸಿ ನಮ್ಮ ಆತ್ಮಬಲವನ್ನು ಹೆಚ್ಚಿಸಿದ್ದೀರಿ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಜನ ಅವಕಾಶ ಕೊಟ್ಟಿದ್ದಾರೆ. ನಾವು ಜನರನ್ನು, ಸಂವಿಧಾನವನ್ನು ನಂಬಿ ಕೆಲಸ ಮಾಡುತ್ತಿದ್ದೇವೆ. ಇದೇ 5ನೇ ತಾರೀಕಿನಂದು ಹಾಸನದಲ್ಲಿ ವಿವಿಧ ಸಂಘಟನೆಗಳ ಜತೆ ಸೇರಿ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ಡಿ.8ರಂದು ಹರಿವು ಬುಕ್ಸ್‌ನ ಎರಡು ಪುಸ್ತಕಗಳ ಬಿಡುಗಡೆ
ಅಂಬೇಡ್ಕರ್ ಅವರು ಹೇಳುತ್ತಾರೆ ʼಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಜನರ ಬದುಕನ್ನು ಬದಲಾವಣೆ ಮಾಡಿದ್ದಾನೆ ಎನ್ನುವುದು ಮುಖ್ಯʼ ಈ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕೋಟ್ಯಂತರ ಜನರ ಬದುಕನ್ನು ಬದಲಾವಣೆ ಮಾಡಿದೆ, ಮಾಡುತ್ತಿದೆ. ನಮಗೆ ಜಾತಿ, ಧರ್ಮ ಮುಖ್ಯವಲ್ಲ. ಜನರ ಕಲ್ಯಾಣ ಮುಖ್ಯ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.