Wednesday, 1st January 2025

DK Shivakumar: ಹೊಸ ವರ್ಷಾಚರಣೆ ವೇಳೆ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ; ಡಿಕೆಶಿ ಖಡಕ್‌ ವಾರ್ನಿಂಗ್

ಬೆಂಗಳೂರು: ಹೊಸ ವರ್ಷಾಚರಣೆ(New Year) ವೇಳೆ ಯಾರೊಬ್ಬರೂ ದುರ್ವರ್ತನೆ ತೋರುವಂತಿಲ್ಲ. ಕಾನೂನು ಉಲ್ಲಂಘನೆ ಮಾಡುವಂತಿಲ್ಲ. ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ. ಇದನ್ನು ಮನವಿಯಾಗಿಯಾದರೂ ಪರಿಗಣಿಸಿ, ಇಲ್ಲವೇ ಎಚ್ಚರಿಕೆ ಎಂದಾದರೂ ಪರಿಗಣಿಸಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಹೇಳಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು “ಬೆಂಗಳೂರಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಎಲ್ಲರ ಚಲನವಲನಗಳ ಮೇಲೆ ಕಣ್ಣಿಡಲಾಗುವುದು. ಹೊಸ ವರ್ಷಾಚರಣೆ ವೇಳೆ ರಾಜ್ಯದ ಗೌರವ ಹಾಗೂ ಗಾಂಭೀರ್ಯ ಕಾಪಾಡಬೇಕು” ಎಂದು ಅವರು ಸೂಚಿಸಿದ್ದಾರೆ.

“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 7 ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಕೇವಲ ಸರ್ಕಾರಿ ಕಾರ್ಯಕ್ರಮಗಳನ್ನು ಮಾತ್ರ ತಡೆ ಹಿಡಿಯಲಾಗಿದೆ. ಅದರ ಹೊರತಾಗಿ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿಯಾಗಿ ಹೊಸ ವರ್ಷಾಚರಣೆ ಮಾಡುವವರು ಮಾಡಿಕೊಳ್ಳಬಹುದು” ಎಂದು ತಿಳಿಸಿದ್ದಾರೆ.

“ಹೊಸ ವರ್ಷಾಚರಣೆ ಮಾರ್ಗಸೂಚಿ, ಸಮಯಾವಕಾಶದ ಬಗ್ಗೆ ಪೊಲೀಸರು ಮಾಹಿತಿ ನೀಡಲಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಬೇಕು. ಪಾಲಿಕೆ ಹಾಗೂ ಪೊಲೀಸರು ವ್ಯಾಪಾರಸ್ಥರಿಗೆ ಮಾರ್ಗಸೂಚಿ ನೀಡಲಿದ್ದಾರೆ. ಕಾಲಾವಕಾಶ ವಿಸ್ತರಣೆ ಮಾಡಿದ್ದರೂ ಯಾರೊಬ್ಬರೂ ಕಾನೂನು ಉಲ್ಲಂಘನೆ ಮಾಡುವಂತಿಲ್ಲ” ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್

ವರ್ಷಾಚರಣೆಗೆ (New Year) ಕ್ಷಣಗಣನೆ​​​ ಶುರುವಾಗಿದೆ. 2025ರ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ. ಈ ಮಧ್ಯೆ ಪೊಲೀಸರು ಬೆಂಗಳೂರಿನ ಎಂಜಿ. ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಬ್ರಿಗೇಡ್​ ರಸ್ತೆಯಲ್ಲಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ನ್ಯೂ ಇಯರ್ ಸೆಲೆಬ್ರೇಷನ್ ಹಾಟ್ ಸ್ಪಾಟ್​ಗಳಿಗೆ ಮಧ್ಯರಾತ್ರಿ ಭೇಟಿ ನೀಡಿರುವ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಹೊಸ ವರ್ಷ ಆಚರಣೆ ಪೂರ್ವ ಸಿದ್ದತೆಯ ಭದ್ರತೆ ಪರಿಶೀಲಿಸಿದ್ದಾರೆ. ಹೊಸ ವರ್ಷದ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಸಿಸಿ ಕ್ಯಾಮರಾ ಅಳವಡಿಕೆ, ಸಿಬ್ಬಂದಿ ನಿಯೋಜನೆ ಸೇರಿದಂತೆ ವಿವಿಧ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಕ್ಯಾಮೆರಾ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಇರುವ ಕ್ಯಾಮೆರಾಗಳನ್ನ ಬಿಟ್ಟು 180 ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ 15 ಸೇಫ್ಟಿ ಐಲ್ಯಾಂಡ್, 15 ವಾಚ್ ಟವರ್ ಸ್ಥಾಪಿಸಲಾಗಿದೆ. ಮೂರು ಆಂಬ್ಯುಲೆನ್ಸ್ ಜತೆ ಎರಡು ಪ್ರೈಮರಿ ಹೆಲ್ತ್ ಸೆಂಟರ್ ವ್ಯವಸ್ಥೆ ಮಾಡಲಾಗಿದೆ. ಕೋರಮಂಗಲ ಬಿಟ್ಟು ಮೈಕೋ ಲೇಔಟ್, HSR ಲೇಔಟ್ ಕಡೆನಲ್ಲೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ 500ಕ್ಕಿಂತ‌ ಹೆಚ್ಚು ಹೋಂಗಾರ್ಡ್, 700 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳನ್ನ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Priyank Kharge: ಪ್ರಿಯಾಂಕ್ ಕಲಬುರ್ಗಿಯ ನಿಜಾಮ ಅಲ್ಲ, ಅವರ ಅನುಯಾಯಿಗಳು ರಜಾಕರೂ ಅಲ್ಲ; ಆರ್‌.ಅಶೋಕ್‌ ವಾಗ್ದಾಳಿ