Sunday, 24th November 2024

DK Shivakumar : ಮಳೆ ಹಿನ್ನೆಲೆ; ಬಿಬಿಎಂಪಿ ನಿಯಂತ್ರಣಾ ಕಚೇರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ, ಪರಿಶೀಲನೆ

DK Shivakumar

ಬೆಂಗಳೂರು: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DK Shivakumar) ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎಲ್ಲಾ ವಲಯ ಅಧಿಕಾರಿಗಳ ಜೊತೆ ವರ್ಚ್ಯುವಲ್ ಮೂಲಕ ನಡೆದ ಸಭೆ ನಡೆಸಿದ ಅವರು, ಮಳೆ ವಿಚಾರ, ನಿಯಂತ್ರಣ ಕೊಠಡಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ, ಸ್ಚಚ್ಛತಾ ಡ್ರೈವ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಚರ್ಚಿಸಿದರು.

ಈ ವೇಳೆ ಮಾನ್ಯ ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ ಹ್ಯಾರೀಸ್, ಆಡಳಿತಗಾರರಾದ ಶ್ರೀ ಉಮಾಶಂಕರ್, ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ಬಿಡಿಎ ಆಯುಕ್ತರಾದ ಜಯರಾಮ್, ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಬಿ.ಎಂ.ಆರ್.ಡಿ.ಎ ಆಯುಕ್ತರಾದ ರಾಜೇಂದ್ರ ಚೋಳನ್, ಪ್ರಧಾನ ಅಭಿಯಂತರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಸೂಚನೆ

“ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಭಾರಿ ಪ್ರಮಾಣದ (65 ಎಂಎಂ) ಮಳೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ನಿಯಂತ್ರಣ ಕೊಠಡಿ ಹಾಗೂ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಕಾರ್ಯೋನ್ಮುಖರಾಗಿರಬೇಕು ಏನು ಸೂಚನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ ಶಿವಕುಮಾರ್ ಅವರು ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

“ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ನಾಲ್ಕು ದಿನಗಳ ಕಾಲ ಅನಿರೀಕ್ಷಿತ ಮಳೆ ಬೀಳಲಿದೆ ಎಂದು ಹವಾಮಾನ ವರದಿ ಬಂದಿದೆ. ಈ ವಿಚಾರವಾಗಿ ನಾವು ಎಚ್ಚರಿಕೆ ವಹಿಸಿದ್ದು, ಮುಂಜಾಗೃತ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ” ಎಂದು ತಿಳಿಸಿದರು.

“ಬೆಂಗಳೂರಿನಲ್ಲಿ ಸರಾಸರಿ 5 ಎಂಎಂನಷ್ಟು ಮಳೆಯಾಗುತ್ತದೆ. ಆದರೆ ಇಂದು ಶೇ 228% ರಷ್ಟು ಮಳೆ ಹೆಚ್ಚಾಗಿ ಸುರಿದಿದೆ. ಮಂಗಳವಾರ ಸುರಿದ ಮಳೆಗೆ 142 ಸ್ಥಳಗಳಿಂದ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ದೂರು ಬಂದಿದೆ. 30 ಮರಗಳು ಬಿದ್ದಿದ್ದು, 22 ಕಡೆಗಳಲ್ಲಿ ಮರ ತೆರವುಗೊಳಿಸಿದ್ದೇವೆ. 32 ಕಡೆಗಳಲ್ಲಿ ಮರದ ರೆಂಬೆ ಕೊಂಬೆ ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಈ ಪೈಕಿ 27 ಕಡೆಗಳಲ್ಲಿ ತಕ್ಷಣವೇ ತೆರವುಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ಯಲಹಂಕ, ಪಶ್ಚಿಮ ಮತ್ತು ಪೂರ್ವ ವಲಯದಲ್ಲಿ ಗರಿಷ್ಠ ಮಳೆಯಾಗಿದೆ. ಮಹದೇವಪುರ, ಆರ್ ಆರ್ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ ಮಧ್ಯಮ ಪ್ರಮಾಣದ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ 3 ದಿನಗಳ ಕಾಲ ಮಳೆ ಸುರಿಯಲಿದ್ದು, ನಾಗರೀಕರು ಜಾಗೃತರಾಗಿರಬೇಕು. ಕಾಲುವೆಗಳಲ್ಲಿ ನೀರು ಹರಿಯುವ ಪ್ರಮಾಣ ಪರೀಕ್ಷಿಸಿದ್ದೇನೆ. ಸಂಪೂರ್ಣ ಪರಿಸ್ಥಿತಿಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾಗುವುದು” ಎಂದು ತಿಳಿಸಿದರು.

“ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ತೊಂದರೆ ಎದುರಿಸಿದರೆ ಟೋಲ್ ಫ್ರೀ ಸಹಾಯವಾಣಿ 1533ಕ್ಕೆ ಕರೆಮಾಡಬಹುದು. ಇನ್ನು ವಲಯವಾರು ಸಹಾಯವಾಣಿಯನ್ನು ಬಿಡುಗಡೆ ಮಾಡಲಾಗಿದೆ. ಅನಿರೀಕ್ಷಿತ ಮಳೆಗೆ ಬೆಂಗಳೂರು ಸಿಲುಕಿರುವುದರಿಂದ ಬಿಬಿಎಂಪಿ ನಿಯಂತ್ರಕ ಕೊಠಡಿಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡುತ್ತಿದ್ದೇನೆ” ಎಂದು ತಿಳಿಸಿದರು.

ಬೆಂಗಳೂರಿನ ಪಾಲಿಗೆ ಸುದಿನ:

“ಬೆಂಗಳೂರಿನ ಪಾಲಿಗೆ ಬುಧವಾರ (ಅಕ್ಟೋಬರ್ 16, 2024) ಅತ್ಯಂತ ಶುಭದಿನ. 50 ಲಕ್ಷ ನಾಗರೀಕರಿಗೆ ಕುಡಿಯಲು ಕಾವೇರಿ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸುಮಾರು 5 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆ ನಿರ್ಮಾಣ ಮಾಡಲಾಗಿದ್ದು, ತೊರೆಕಾಡನಹಳ್ಳಿಯಲ್ಲಿ ನಾನು ಹಾಗೂ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಶಾಸಕರುಗಳು ಕೂಡ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.

ಇದನ್ನೂ ಓದಿ: Bangalore Rain : ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್‌; ನಾಳೆ ಐಟಿ, ಬಿಟಿಯವರಿಗೆ ವರ್ಕ್‌ ಫ್ರಂ ಹೋಮ್

ಖಾಸಗಿ ಸಂಸ್ಥೆಗಳು ರಾಜ್ಯೋತ್ಸವ ಆಚರಣೆ ಮಾಡಬೇಕು

“ನವೆಂಬರ್ 1ರಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲಾ ಉದ್ದಿಮೆ, ಕಂಪನಿಗಳು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಸರ್ಕಾರದ ವತಿಯಿಂದ ಮನವಿ ಮಾಡುತ್ತಿದ್ದೇವೆ. ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವದ ಜತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಬೆಂಗಳೂರಿನಲ್ಲಿರುವ ಜನರು ಹಾಗೂ ಮುಂದಿನ ಪೀಳಿಗೆ ಮಕ್ಕಳಿಗೆ ಕನ್ನಡದ ಮಹತ್ವ ಅರಿಯುವಂತೆ ಮಾಡಬೇಕು. ಕನ್ನಡದ ಸ್ವಾಭಿಮಾನಕ್ಕೆ ಗೌರವ ನೀಡಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಹೊರಗಿನಿಂದ ಬಂದವರು ಕನ್ನಡವನ್ನು ಕಲಿಯುವ ಆಸಕ್ತಿ ತೋರಿ, ಈ ಭಾಷೆಗೆ ಗೌರವ ನೀಡುವ ಕೆಲಸ ಮಾಡಬೇಕು.

ಇನ್ನು ಕನ್ನಡ ಸಂಘಟನೆಗಳು ಯಾವುದೇ ಸಂಸ್ಥೆಗಳ ಮೇಲೆ ದಾಳಿ ಮಾಡಿ ಒತ್ತಾಯ ಮಾಡಬಾರದು. ಈ ವಿಚಾರವನ್ನು ಸರ್ಕಾರ ನಿಭಾಯಿಸಲಿದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ರಾಷ್ಟ್ರ ಧ್ವಜಕ್ಕೆ ಗೌರವ ನೀಡುವಂತೆ ನಮ್ಮ ನಾಡಧ್ವಜಕ್ಕೂ ಗೌರವ ನೀಡಬೇಕು” ಎಂದು ತಿಳಿಸಿದರು.

ಪ್ರ