ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು (Drinking Water) ಸರಬರಾಜಾಗುವ ಕಾವೇರಿ (Kaveri Water) ಐದನೇ ಹಂತದ ಯೋಜನೆಯನ್ನು ಅ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DCM DK Shivakumar) ಲೋಕಾರ್ಪಣೆ ಮಾಡಲಿದ್ದಾರೆ.
ಜೈಕಾ (ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳಿಗೆ ಸಮರ್ಪಕ ನೀರನ್ನು ಒದಗಿಸುವ ಹಾಗೂ ಬೆಂಗಳೂರಿನ ದೂರದೃಷ್ಟಿಯನ್ನಿಟ್ಟುಕೊಂಡು ಮಹತ್ವದ ನಿರ್ಧಾರವನ್ನು 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಯೋಜನೆ ರೂಪಿಸಿ ಚಾಲನೆ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಯೋಜನೆಯಿಂದ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 775 ಎಂಎಲ್ಡಿ ನೀರು ಪೂರೈಕೆಯಾಗಲಿದ್ದು, ಮೂಲೆಮೂಲೆಗೂ ಕಾವೇರಿ ನೀರು ಸರಬರಾಜಾಗಲಿದೆ. ಹೆಚ್ಚುವರಿಯಾಗಿ 50 ಲಕ್ಷ ಜನರು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂದರು. ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರಿಂದ ಕಾರ್ಯಕ್ರಮದ ಆಹ್ವಾನಪತ್ರಿಕೆಯನ್ನು ಅವರು ಸ್ವೀಕರಿಸಿದರು.
ವೇಗವಾಗಿ ಬೆಳೆಯುತ್ತಿರುವ ಮಹಾನಗರ ಬೆಂಗಳೂರಿನ ಭವಿಷ್ಯದ ದೂರದೃಷ್ಟಿಯನ್ನಿಟ್ಟುಕೊಂಡು ಅನುಷ್ಠಾನಗೊಳಿಸಿದ ಮಹತ್ವದ ಯೋಜನೆ ಇದಾಗಿದೆ. ಇದರಿಂದ 110 ಹಳ್ಳಿಗಳ ನಿವಾಸಿಗಳಿಗೆ ಹಾಗೂ ಬೆಂಗಳೂರು ನಗರದ ಎಲ್ಲ ನಿವಾಸಿಗಳಿಗೆ ಸಮರ್ಪಕ ನೀರು ಸರಬರಾಜಾಗಲಿದೆ. ಅವಕಾಶಗಳ ನಗರವೆಂದೇ ಖ್ಯಾತಿಯಾಗಿರುವ ಬೆಂಗಳೂರು ನಗರದಲ್ಲಿ ಇನ್ನಷ್ಟು ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಗತ್ಯ ಯೋಜನೆಗಳನ್ನು ನಮ್ಮ ಸರಕಾರ ರೂಪಿಸಿದ್ದು, ಅದನ್ನು ಸಾಕಾರಗೊಳಿಸಲಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ತಿಳಿಸಿದರು.
ಈ ಯೋಜನೆಯನ್ನು ವೇಗವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಖುದ್ದಾಗಿ ಟಿ.ಕೆ.ಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ 5ನೇ ಹಂತದ ಯೋಜನೆ ಮೂಲಕ ಯಶವಂತಪುರ, ದಾಸರಹಳ್ಳಿ, ಬ್ಯಾಟರಾಯನಪುರ, ಬೆಂಗಳೂರು ದಕ್ಷಿಣ, ಮಹದೇವಪುರ, ರಾಜರಾಜೇಶ್ವರಿನಗರ, ಕೆಆರ್ಪುರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳ ಮನೆ ಮನೆಗೂ ಹಾಗೂ ಬೆಂಗಳೂರು ನಗರದ ಎಲ್ಲೆಡೆ ಕಾವೇರಿ ನೀರು ಸಮರ್ಪಕ ಸರಬರಾಜು ಆಗಲಿದೆ ಎಂದರು.
ಮನೆ ಮನೆಗೆ ಕಾವೇರಿ ತಲುಪಿಸುವ ಬೆಂಗಳೂರು ಜಲಮಂಡಳಿಯ ಈ ಯೋಜನೆಯು ಶೀಘ್ರದಲ್ಲೇ ಬೆಂಗಳೂರನ್ನು ನೀರಿನ ಸಮಸ್ಯೆಯಿಂದ ಮುಕ್ತಿಗೊಳಿಸಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಪ್ರತಿಯೊಂದು ಮನೆಗೂ ಸಮರ್ಪಕ ನೀರು ಹರಿಸುವುದು ಜಲಮಂಡಳಿಯ ಗುರಿಯಾಗಿದೆ ಎಂದರು.
ಕಾವೇರಿ ಐದನೇ ಹಂತದ ಯೋಜನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಟಿ.ಕೆ.ಹಳ್ಳಿ)ಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ಅ.16ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಯಾಗಲಿದೆ. ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ/ರಾಜ್ಯ ಸಚಿವರುಗಳು ಹಾಗೂ ಸಂಸದರು ಮತ್ತು ಶಾಸಕರು ಹಾಗೂ ಇನ್ನೀತರ ಎಲ್ಲ ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಮನೆಮನೆಗೂ ಕಾವೇರಿ ನೀರು ತಲುಪಿಸಿ ಸಮೃದ್ಧ ಬೆಂಗಳೂರಿಗೆ ಕೈ ಜೋಡಿಸಿರುವ ಜೈಕಾ ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೇಕುಚಿ ಟಕುರೋ, ಕೌನ್ಸಲ್ ಜನರಲ್ ಆಫ್ ಜಪಾನ್ ಇನ್ ಇಂಡಿಯಾದ ಟ್ಸುಟೋಮು, ಭಾರತದಲ್ಲಿ ಜಪಾನ್ ರಾಯಭಾರ ಕಚೇರಿಯ ಆರ್ಥಿಕ ಸಚಿವ(ಆರ್ಥಿಕ ಮತ್ತು ಅಭಿವೃದ್ಧಿ)ರಾದ ಹೊಕುಗೋ ಕ್ಯೋಕು ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಇದನ್ನೂ ಓದಿ: Glowing Skin: ಅರಿಶಿನ ನೀರು ಮತ್ತು ನಿಂಬೆ ನೀರು; ಹೊಳೆಯುವ ಚರ್ಮಕ್ಕೆ ಯಾವುದು ಉತ್ತಮ?