Thursday, 19th September 2024

DK Suresh: ಶಾಸಕ ಸ್ಥಾನದಿಂದ ಮುನಿರತ್ನ ಅನರ್ಹಗೊಳಿಸಿ: ಡಿ.ಕೆ. ಸುರೇಶ್

DK Suresh

ಬೆಂಗಳೂರು: ಜಾತಿ ನಿಂದನೆ ಹಾಗೂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಹಾಗೂ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಶಾಸಕ ಮುನಿರತ್ನ (MLA Munirathna) ಅವರನ್ನು ಬಿಜೆಪಿ ಪಕ್ಷದಿಂದ (BJP) ಉಚ್ಚಾಟಿಸಬೇಕು ಮತ್ತು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಆಗ್ರಹಿಸಿದರು.

ಸದಾಶಿವನಗರದ ನಿವಾಸದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿರತ್ನ ಅವರಂಥ ನಾಯಕರು ರಾಜ್ಯದಲ್ಲಿ ಇದ್ದರೆ ಜಾತಿ ಸಂಘರ್ಷಗಳು ಹೆಚ್ಚಾಗುತ್ತವೆ. ಆದ ಕಾರಣಕ್ಕೆ ಇವರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿ ಕೇಂದ್ರ ನಾಯಕರಿಗೆ ಕಿವಿ ಕೇಳಿಸುತ್ತಿದ್ದರೆ, ಕೀಳು ಮಟ್ಟದ ಪದ ಬಳಕೆ ಮಾಡಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | MLA Munirathna: ಕೊಲೆ ಬೆದರಿಕೆ, ಜಾತಿ ನಿಂದನೆ; ಬಿಜೆಪಿ ಶಾಸಕ ಮುನಿರತ್ನ ವಶಕ್ಕೆ

ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರೇ, ಮುನಿರತ್ನ ತಮ್ಮ ಸಮುದಾಯದ ತಾಯಂದಿರನ್ನು ಅವಮಾನಿಸಿದ್ದಾರೆ. ಇದಕ್ಕೆ ನೀವೇ ಉತ್ತರಿಸಬೇಕು. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಅವರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಇದರ ಬಗ್ಗೆ ಉತ್ತರಿಸಬೇಕು ಎಂದರು.

ಬಾಯಲ್ಲಿ ರಾಮನ ಜಪ, ಮಹಿಳೆಯರಿಗೆ ಅಪಮಾನ

ಒಂದು ಕಡೆ ರಾಮನ, ಸಂಸ್ಕೃತಿಯ ಜಪ ಮಾಡುತ್ತ ಇನ್ನೊಂದು ಕಡೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು. ಎಲ್ಲಿ, ಯಾರ ಬಳಿ ಮಾತನಾಡುತ್ತ ಇದ್ದೀನಿ ಎನ್ನುವ ಅರಿವೂ ಅವರಿಗಿಲ್ಲದೇ ಹೆಂಡತಿ, ತಾಯಿಯನ್ನು ಮಂಚಕ್ಕೆ ಕರೆಯುವ ಕೆಟ್ಟ ಪ್ರವೃತ್ತಿ ಕೇಂದ್ರ ಬಿಜೆಪಿ ನಾಯಕರಿಗೆ ಕೇಳಿಸುತ್ತಿಲ್ಲವೇ? ಆರ್‌ಎಸ್‌ಎಸ್ ನಂಟು ಇಟ್ಟುಕೊಂಡಿರುವ ಇವರ ನಡವಳಿಕೆ ನಾಚಿಕೆ ತರುವಂತಹದ್ದು ಎಂದರು.

80 ರ ದಶಕದಲ್ಲಿ ದಲಿತರ ವಿರುದ್ಧ ಬಳಸುತ್ತಿದ್ದ ಪದಗಳನ್ನು ಈಗ ಬಳಸುತ್ತಾ ಇದ್ದಾರೆ. ಇಡೀ ಮಹಿಳಾ ಹಾಗೂ ತಾಯಿ ಕುಲಕ್ಕೆ ಅಪಮಾನ. ವಾರಕ್ಕೊಮ್ಮೆ ರಾಜ್ಯಕ್ಕೆ ಬಂದು ತೋಚಿದ್ದು ಮಾತನಾಡಿ ಹೋಗುವ ಕೇಂದ್ರ ಬಿಜೆಪಿ ನಾಯಕರು ಇದರ ಬಗ್ಗೆ ಉಸಿರು ಬಿಡಲಿ ಎಂದು ಅವರು ಒತ್ತಾಯಿಸಿದರು.

ಕುಮಾರಸ್ವಾಮಿ ಒಕ್ಕಲಿಗರ ಪರ ನಿಂತು ಮುನಿರತ್ನರನ್ನು ವಜಾ ಮಾಡಿಸುತ್ತಾರೆ

ಒಕ್ಕಲಿಗರನ್ನು ಅಪಮಾನ ಮಾಡಲಾಗಿದೆ. ಈಗ ಸಮುದಾಯದ ಪರವಾಗಿ ಕುಮಾರಸ್ವಾಮಿ ಅವರು ನಿಲ್ಲುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಕುಮಾರಸ್ವಾಮಿ ಏನೇನು ಹೇಳಿಕೆ ನೀಡುತ್ತಾರೆ ಎಂಬುದನ್ನು ಮಧ್ಯಮದವರು ಗಮನಿಸಿ ನೋಡಿ. ನರೇಂದ್ರ ಮೋದಿ ಅವರಿಗೆ ಹೇಳಿ ಪಕ್ಷದಿಂದ ಮುನಿರತ್ನರನ್ನು ವಜಾ ಮಾಡಿಸುತ್ತಾರೆ. ಕುಮಾರಸ್ವಾಮಿ ಅವರಿಗೆ ಇರುವ ತಾಕತ್ತು ನಿಮಗೆ ಗೊತ್ತಿಲ್ಲ ಎಂದರು.

ರೇಣುಕಾಸ್ವಾಮಿಗೆ ಆದ ಗತಿ ನಿನಗೆ ಆಗುತ್ತದೆ ಎಂದು ಮುನಿರತ್ನ ಬೆದರಿಕೆ ಹಾಕಿದ್ದಾರೆ ಎಂದು ಗುತ್ತಿಗೆದಾರ ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದೀಪಕ್, ಮುನಿರತ್ನ ಸಂಬಂದಿ. ನೂರಕ್ಕೆ ನೂರರಷ್ಟು ಇದಕ್ಕೆ ಇವರ ಸಂಬಂಧ ಇದ್ದೇ ಇರುತ್ತದೆ. ಆಡಿಯೋದಲ್ಲಿ ರೌಡಿ ಸೈಲೆಂಟ್ ಸುನೀಲ್ ಹೆಸರು ಹೇಳಿದ್ದಾರೆ. ಅಂದರೆ ಯಾವ ರೀತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ ಎಂದರು.

ಮೋದಿ ಅವರ ತಾಯಿ ಬಗ್ಗೆ ಮಾತನಾಡಿದ್ದರು

ಪ್ರಧಾನಿ ಮೋದಿ, ಅಮಿತ್ ಷಾ, ನಡ್ದಾ ಅವರಿಗೆ ಬಿಜೆಪಿ ಶಾಸಕನ ನುಡಿಮುತ್ತುಗಳ ಬಗ್ಗೆ ವಿವರಣೆ ನೀಡಬೇಕು. ಮೋದಿ ಅವರು ಇದನ್ನು ಸಹಿಸಿಕೊಳ್ಳಬಹುದು. ಏಕೆಂದರೆ ಈ ಹಿಂದೆ ಮೋದಿ ಅವರ ತಾಯಿಯ ಬಗ್ಗೆ ಮಾತನಾಡಿದ್ದನ್ನು ಮನ್ನಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದರು.

ಕುಮಾರಸ್ವಾಮಿ ಗಲಾಟೆ ಮಾಡಿಸಿರಬಹುದು

ನಾಗಮಂಗಲ ಗಲಾಟೆ ಕಾಂಗ್ರೆಸ್ ಚಿತಾವಣೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್‌, ವಾರಕ್ಕೊಮ್ಮೆ ಬಂದು ಏನೇನೋ ಮಾತನಾಡುವ ಅವರು ಇದಕ್ಕೆ ಕಾರಣ ಇರಬಹುದು ಎಂದು ನಾನೂ ಹೇಳಬಹುದು ಅಲ್ಲವೇ? ಅವರು ಏನು ಆರೋಪ ಮಾಡುತ್ತಾರೋ ಆದೇ ರೀತಿ ನಾನೂ ಆರೋಪ ಮಾಡುತ್ತೇನೆ ಎಂದರು.

ಈ ಸುದ್ದಿಯನ್ನೂ ಓದಿ | Traffic Restrictions: ಗಣೇಶ ಮೆರವಣಿಗೆ; ಇಂದು, ನಾಳೆ ಬೆಂಗಳೂರಿನ ಹಲವೆಡೆ ಮಾರ್ಗ ಬದಲಾವಣೆ

ರಾಹುಲ್ ಗಾಂಧಿ ಭೇಟಿ ಕಾಕತಾಳೀಯ

ಡಿಸಿಎಂ ಅವರ ಅಮೇರಿಕಾ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಟುಂಬದ ಜತೆ ಪ್ರವಾಸ ತೆರಳಿ ಐದಾರು ವರ್ಷಗಳೇ ಕಳೆದಿದ್ದವು. ಅನೇಕ ಬಾರಿ ಕೋರ್ಟ್‌ಯಿಂದ ಅನುಮತಿ ಪಡೆಯಲು ಆಗಿರಲಿಲ್ಲ. ಅಮೇರಿಕಾ ಭೇಟಿ ಬಗ್ಗೆ ಮಾಧ್ಯಮಗಳು ಉಹಾಪೋಹದ ಸುದ್ದಿಗಳನ್ನು ಮಾಡುತ್ತಿವೆ. ರಾಹುಲ್ ಗಾಂಧೀ ಅವರ ಭೇಟಿ ಕಾಕತಾಳೀಯ. ಯಾವುದೇ ರಾಜಕೀಯ ಚರ್ಚೆ ನಡೆಸಬೇಕು ಎಂದರೆ ದೆಹಲಿಗೆ ಹೋಗಬಹುದಲ್ಲವೇ? ಎಂದು ತಿಳಿಸಿದರು.