ಮೈಸೂರು: ನಟ ಡಾಲಿ ಧನಂಜಯ್(Dolly Dhananjay) ಮತ್ತು ಡಾ. ಧನ್ಯತಾ ಇಂದು(ಡಿ.29) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ(Chamundi Hill) ಭೇಟಿ ನೀಡಿದ್ದು,ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿಯ ದರ್ಶನ ಪಡೆದಿರುವ ಭಾವಿ ದಂಪತಿ ಬಳಿಕ ಲಗ್ನಪತ್ರಿಕೆಗೆ ಪೂಜೆ ಮಾಡಿಸಿದ್ದಾರೆ.
ಇಂದು ಮುಂಜಾನೆ ನಟ ಡಾಲಿ ಧನಂಜಯ್ ತಮ್ಮ ಭಾವಿ ಪತ್ನಿ ಡಾ.ಧನ್ಯತಾ ಅವರೊಂದಿಗೆ ಚಾಮುಂಡಿ ಬೆಟ್ಟದಲ್ಲಿ ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದು,ತಮ್ಮ ಲಗ್ನಪತ್ರಿಕೆಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಡಾಲಿ “ಮದುವೆಗೆ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ಲಗ್ನಪತ್ರಿಕೆ ಕೊಡುವುದನ್ನು ಶುರು ಮಾಡಿದ್ದೇವೆ. ಹಿರಿಯರನ್ನು ಖುದ್ದು ನಾವಿಬ್ಬರೇ ಭೇಟಿ ಮಾಡಿ ಆಶೀರ್ವಾದ ಪಡೆದು ಲಗ್ನಪತ್ರಿಕೆ ನೀಡಿದ್ದೇವೆ. ಇಂದು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದೇವೆ. ಮೈಸೂರಿನಲ್ಲೇ ಮದುವೆ ನಡೆಯುತ್ತಿದೆ. ಎಲ್ಲರೂ ಬಂದು ನಮ್ಮ ವೈವಾಹಿಕ ಜೀವನಕ್ಕೆ ಆಶೀರ್ವಾದ ಮಾಡಿ. ಎಲ್ಲರಿಗೂ ಲಗ್ನಪತ್ರಿಕೆ ಕೊಡುತ್ತೇನೆ” ಎಂದು ಹೇಳಿದ್ದಾರೆ.
ಡಾಲಿ ಧನಂಜಯ್ ಮತ್ತು ಧನ್ಯತಾ ಜೋಡಿ ಮದುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2025ರ ಫೆಬ್ರವರಿ 15 ಮತ್ತು 16ರಂದು ನಡೆಯಲಿದೆ. ಲಗ್ನಪತ್ರಿಕೆಯನ್ನು ವಿಭಿನ್ನ ರೀತಿಯಲ್ಲಿ ತಯಾರಿಸಿದ್ದು, ಪೋಸ್ಟ್ ಕಾರ್ಡ್ ಮಾದರಿಯ ಆಕರ್ಷಕ ಕೈ ಬರಹದ ಮೂಲಕ ಎಲ್ಲರನ್ನೂ ಡಾಲಿ ತಮ್ಮ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಈಗಾಗಲೇ ಈ ಜೋಡಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ,ಮುಖ್ಯಮಂತ್ರಿ ಸಿದ್ಧರಾಮಯ್ಯ,ಡಿ.ಕೆ ಶಿವಕುಮಾರ್,ಡಿ.ಕೆ ಸುರೇಶ್ ಸೇರಿದಂತೆ ಇನ್ನು ಹಲವು ರಾಜಕೀಯ ನಾಯಕರು ಮತ್ತು ಚಿತ್ರರಂಗದ ಗಣ್ಯರನ್ನು ಭೇಟಿಮಾಡಿ ಮದುವೆಗೆ ಆಹ್ವಾನಿಸಿದ್ದಾರೆ. ಇನ್ನು ಡಾಲಿ ಅಭಿಮಾನಿಗಳು ತಮ್ಮ ನಟ ಹಸೆಮಣೆ ಏರಿ ಕೂರುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಮಧ್ಯಮ ವರ್ಗದ ಹುಡುಗಿಯನ್ನು ತಮ್ಮ ಬಾಳ ಸಂಗಾತಿಯಾಗಿ ಆರಿಸಿಕೊಂಡು ಸರಳ ಮತ್ತು ಅರ್ಥಪೂರ್ಣವಾಗಿ ಮದುವೆಯಾಗುತ್ತಿರುವ ಡಾಲಿ ಧನಂಜಯ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಡಾಲಿ ಲಗ್ನಪತ್ರಿಕೆ
ಡಾಲಿ ಧನಂಜಯ್ ಅವರ ವಿವಾಹದ ಲಗ್ನಪತ್ರಿಕೆ ವಿನೂತನವಾಗಿದೆ. ಕೈಬರಹದ ಲಗ್ನಪತ್ರಿಕೆಗೆ ಹಲವರು ಫಿದಾ ಆಗಿದ್ದಾರೆ. “ಪ್ರೀತಿಯ ಬಂಧು ಮಿತ್ರರೇ, ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ. ತಾವು ಎಲ್ಲಿದ್ದರೂ ಜಗದ ಯಾವ ಮೂಲೆಯಲ್ಲಿದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ. ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ-ಧನ್ಯತ” ಎಂದು ಬರೆದಿರುವ ಪೋಸ್ಟ್ ಕಾರ್ಡ್ ಮಾದರಿಯ ಲಗ್ನಪತ್ರಿಕೆ ಎಲ್ಲೆಡೆ ವೈರಲ್ ಆಗಿದೆ. ಮುತ್ತು ಪೋಣಿಸಿದಂತಿರುವ ಕೈ ಬರಹ ಯಾರದ್ದಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ನಿದ್ದೆಗೆ ಜಾರಿದ ಕ್ಯಾಬ್ ಡ್ರೈವರ್-ಕೀ ಪಡೆದು ತಾನೇ ಡ್ರೈವ್ ಮಾಡಿದ ರೋಡೀಸ್ ಶೋ ಸ್ಪರ್ಧಿ