Friday, 29th November 2024

ಒಂದೇ ಕೆಲಸ ಎರಡು ಬಿಲ್‌ !

ಶಕ್ತಿಸೌಧದಲ್ಲಿಯೇ ಭಾರೀ ಗೋಲ್‌ಮಾಲ್

ಸ್ಮಾರ್ಟ್ ಸಿಟಿ ಪ್ರಾಧಿಕಾರದಿಂದ 1.94 ಕೋಟಿ, ಪಿಡಬ್ಲ್ಯೂಡಿಯಿಂದ ₹ 1.25 ಕೋಟಿ ಬಿಲ್

ಪ್ರತಿವರ್ಷ ₹ 85-87 ಲಕ್ಷ ಖರ್ಚು

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಈಗಾಗಲೇ ಕರೋನಾದ ಹೊಡೆತದಿಂದ ಆರ್ಥಿಕವಾಗಿ ಜರ್ಜರಿತವಾಗಿರುವ ರಾಜ್ಯದ ಬೊಕ್ಕಸಕ್ಕೆ ಅಧಿಕಾರಿಗಳು, ನಕಲಿ ಬಿಲ್‌ಗಳನ್ನು ಸೃಷ್ಟಿಸುವ ಮೂಲಕ ಇನ್ನಷ್ಟು ಹೊರೆ ಹೊರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಹೌದು, ರಾಜಧಾನಿಯ ಶಕ್ತಿಸೌಧದ ವಿದ್ಯುತ್ ಹಾಗೂ ದೀಪದ ವ್ಯವಸ್ಥೆಗೆಂದು ಲೋಕೋಪಯೋಗಿ ಇಲಾಖೆಯಲ್ಲಿ ಪ್ರತ್ಯೇಕ ಅನುದಾನವಿದ್ದರೂ, ಎಲ್‌ಇಡಿ ಲೈಟ್‌ಗಳನ್ನು ಹಾಕುವ ನೆಪದಲ್ಲಿ ಸ್ಮಾರ್ಟ್ ಸಿಟಿ ಪ್ರಾಧಿಕಾರದಿಂದ 1.94 ಕೋಟಿ ರು. ಹಾಗೂ ಲೋಕೋಪಯೋಗಿ ಇಲಾಖೆಯಿಂದ 1.25 ಕೋಟಿ ರು. ಗಳ ಬಿಲ್ ಅನ್ನು ತೋರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿದ್ಯುತ್ ಸಮಸ್ಯೆೆಯಾದರೆ ಅದನ್ನು ಸರಿಪಡಿಸುವುದಕ್ಕಾಗಿಯೇ ಲೋಕೋಪಯೋಗಿ ಇಲಾಖೆಯ ಬಳಿ ಅನುದಾನವಿರುವಾಗ, ಅದನ್ನು ಬಳಸಿಕೊಳ್ಳುವ ಬದಲು ಪ್ರತ್ಯೇಕ ಬಿಲ್ ಅನ್ನು ಸೃಷ್ಟಿಸಿರುವುದು ಒಂದು ಭಾಗವಾದರೆ, ಒಂದೇ ಕೆಲಸಕ್ಕೆ ಎರಡು ಇಲಾಖೆಯಿಂದ ಬಿಲ್ ತೋರಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಈ ರೀತಿ ಶಕ್ತಿಸೌಧಕ್ಕೆ ಬೆಳಕು ನೀಡುವ ನೆಪದಲ್ಲಿ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಆರ್‌ಟಿಐನಲ್ಲಿ ಬಹಿರಂಗ ವಾಗಿದೆ. ದಾಖಲೆಗಳ ಪ್ರಕಾರ ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್‌ನಲ್ಲಿ ಎಲ್‌ಇಡಿ ಬಲ್ಬ್ ಹಾಕುವುದಕ್ಕೆ 1.94 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಸ್ಮಾರ್ಟ್ ಸಿಟಿ ಪ್ರಾಧಿಕಾರಿ ಬಿಲ್ ತೋರಿಸಿ, ಅನುದಾನವನ್ನು ಪಡೆದಿದೆ. ಇದೇ ಕೆಲಸಕ್ಕೆ ಲೋಕೋಪಯೋಗಿ ಇಲಾಖೆಯೂ ಪ್ರತ್ಯೇಕವಾಗಿ ಅನುದಾನ ಪಡೆದಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಸ್ಮಾರ್ಟ್ ಸಿಟಿ ಪ್ರಾಧಿಕಾರದಿಂದ ಕೆಲಸ: ಹಾಗೆ ನೋಡಿದರೆ ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್‌ಗಳ ನಿರ್ವಹಣೆ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಬರಲಿದೆ. ಆದರೆ ಕರೋನಾ ಸಮಯದಲ್ಲಿ ಸ್ಮಾರ್ಟ್ ಸಿಟಿ ಪ್ರಾಧಿಕಾರ ಏಕೆ ಈ ಕಾರ್ಯನಿರ್ವಹಿಸಿದೆ ಎನ್ನುವುದಕ್ಕೆ ಉತ್ತರವಿಲ್ಲ. ಕರೋನಾ ಸಂಕಷ್ಟ ಸಮಯದಲ್ಲಿ ಈ ರೀತಿಯ ದುಂದು ವೆಚ್ಚದ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.

ಪ್ರತ್ಯೇಕ ಅನುದಾನವಿರುವಾಗ ಏಕೆ ಕಾಮಗಾರಿ?
ಈಗಾಗಲೇ ಲೋಕೋಪಯೋಗಿ ಇಲಾಖೆಯಲ್ಲಿ ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸುತ್ತಮುತ್ತಲಿನ ಸರಕಾರ ಕಟ್ಟಡಗಳ ವಿದ್ಯುತ್ ಸಂಬಂಧಿ ಕಾಮಗಾರಿಗೆಂದೇ 80ರಿಂದ 85 ಲಕ್ಷ ರು. ಪ್ರತ್ಯೇಕ ಅನುದಾನವಿದೆ. ಹೀಗಿರುವಾಗ, ಈ ರೀತಿ ಪ್ರತ್ಯೇಕವಾಗಿ 1.95 ಕೋಟಿ ರು. ಒಂದು ಕಡೆ, 1.25 ಕೋಟಿ ರು. ಇನ್ನೊಂದು ಇಲಾಖೆಯಿಂದ ಖರ್ಚು ಮಾಡುವ ಅಥವಾ ಮಾಡಿದಂತೆ ಬಿಲ್ ತೋರಿಸುವ ಅಗತ್ಯವೇನಿತ್ತು. ಈ ರೀತಿ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕೂಡಲೇ ಕ್ರಮ ತಗೆದುಕೊಳ್ಳಬೇಕು ಎನ್ನುವ ಮಾತುಗಳು ಕೇಳಿಬಂದಿದೆ.

***

ಪ್ರತಿ ವರ್ಷ ವಿಧಾನಸೌಧ, ವಿಕಾಸಸೌಧದ ನಿರ್ವಹಣೆಯನ್ನು ವಿದ್ಯುತ್ ವಿಭಾಗದಿಂದ ಖರ್ಚಾಗುತ್ತಿದ್ದರೂ ಎಇ, ಎಇಇ ಅವರು
ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಗ್ರವಾಗಿ ತನಿಖೆ ನಡಿಸಿ ಎಇ ಸುರೇಶ್ ಬಾಬು ಮತ್ತು ಎಇಇ ರಾಜೇಶ್ ಅವರಿಂದ ನಷ್ಟವಾದ ಹಣ ವಸೂಲಿ ಮಾಡಬೇಕು.

– ಮರಿಲಿಂಗಗೌಡ ಮಾಲಿ ಪಾಟೀಲ್, ಸಾಮಾಜಿಕ ಕಾರ್ಯಕರ್ತ