Thursday, 26th December 2024

Dr. C. Jayarama Rao: ಶಿಕ್ಷಣ ಭೀಷ್ಮ ಡಾ. ಸಿ. ಜಯರಾಮರಾವ್ ಇನ್ನಿಲ್ಲ

Dr. C. Jayarama Rao

ತುಮಕೂರು: ನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿಗಳು, ವೈದ್ಯರು ಹಾಗೂ ಸ್ವತಃ ಕ್ರೀಡಾಪಟುಗಳಾಗಿದ್ದ ಶಿಕ್ಷಣ ಭೀಷ್ಮ ಡಾ. ಸಿ. ಜಯರಾಮರಾವ್ (99) ಅವರು (Dr. C. Jayarama Rao) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ನಿಧನರಾದರು.

ಶ್ರೀಯುತರು ಕಳೆದ ಕೆಲ ದಿನಗಳಿಂದಷ್ಟೆ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪುತ್ರ ಡಾ. ಸಿ.ಜೆ. ರಮೇಶ್, ಸೊಸೆ ಡಾ. ಬಿಂದು, ಮೊಮ್ಮಕ್ಕಳು ಸೇರಿ ಅಪಾರ ಶಿಷ್ಯಂದಿರು, ಬಂಧು ಬಳಗವನ್ನು ಅಗಲಿದ್ದಾರೆ.

1926ರ ಜ.6ರಂದು ದಿ. ಸಿ. ಲಕ್ಷ್ಮಣರಾವ್ ಮತ್ತು ಲಕ್ಷ್ಮೀಬಾಯಿ ದಂಪತಿ ಪುತ್ರರಾಗಿ ಜನಿಸಿದ ಜಯರಾಮರಾವ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರು. 1971ರಲ್ಲಿ ನಗರದ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಪ್ರತಿಷ್ಠಿತ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನ ಹಂಚುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಸಿ. ಜಯರಾಮರಾವ್ ಅವರು ಕ್ರಿಕೆಟ್ ಕ್ರೀಡಾಪಟು ಸಹ ಆಗಿದ್ದರು. 1961ರಲ್ಲಿ ತುಮಕೂರಿನಲ್ಲಿ ಪ್ರಥಮ ಬಾರಿಗೆ ಕ್ರಿಕೆಟ್ ಕ್ಲಬ್ ಪ್ರಾರಂಭಿಸಿದ ಹೆಗ್ಗಳಿಕೆ ಇವರದ್ದು. 1974-75ರಲ್ಲಿ ತುಮಕೂರಿನಲ್ಲಿ ರಣಜಿ ಕ್ರಿಕೆಟ್ ಪಂದ್ಯ ನಡೆಯಲು ಸಹ ಕಾರಣೀಭೂತರಾಗಿದ್ದರು.

ಕ್ರೀಡಾ ಕ್ಷೇತ್ರ, ಶಿಕ್ಷಣ ಕ್ಷೇತ್ರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಅನುಪಮ ಸೇವೆಗಾಗಿ 2003ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ 2005ರಲ್ಲಿ ರಾಕ್‌ಲೈನ್ ಪ್ರಶಸ್ತಿ, ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ಶಿಕ್ಷಣ ಭೀಷ್ಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಮುಡಿಗೇರಿದ್ದವು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಇಂದು ಬೆಳಿಗ್ಗೆ ವಿದ್ಯಾನಿಕೇತನ ಶಾಲೆಗೆ ಶ್ರೀಯುತರ ಪಾರ್ಥೀವ ಶರೀರವನ್ನು ತರಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿಗಣೇಶ್ ಸೇರಿ ಹಲವು ಗಣ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಮೃತರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಶ್ರೀಯುತರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಜಿಲ್ಲೆಯ ಶಾಸಕರುಗಳು, ಅಧಿಕಾರಿಗಳು ಹಾಗೂ ಶಿಕ್ಷಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ನಗರದ ಗಾರ್ಡನ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಪಾರ ಜನಸ್ತೋಮದ ನಡುವೆ ನೆರವೇರಿತು.

ಈ ಸುದ್ದಿಯನ್ನೂ ಓದಿ | Shiggaon Accident: ಶಿಗ್ಗಾಂವಿ ಬಳಿ ಭೀಕರ ಅಪಘಾತ; ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರ ದಾರುಣ ಸಾವು