Friday, 22nd November 2024

ರಾಜ್‌ಕುಮಾರ್‌, ಸಿದ್ದರಾಮಯ್ಯ ನನ್ನ ಪಾಲಿನ ದೇವರು: ಮಾಜಿ ಸಚಿವೆ ಜಯಮಾಲಾ

ವಿಶ್ವವಾಣಿ ಕ್ಲಬ್‌’ಹೌಸ್‌ ಸಂವಾದ – 4

ಹಿರಿಯ ನಟಿ, ಮಾಜಿ ಸಚಿವೆ ಜಯಮಾಲಾ ಮಾತು

ಶೂಟಿಂಗ್ ವೇಳೆ ಸಾಯಬೇಕಿದ್ದ ನನ್ನನ್ನು ಬದುಕಿಸಿದ್ದ ರಾಜ್‌ಕುಮಾರ್

ಬೆಂಗಳೂರು: ಯಾವುದೇ ಹಿನ್ನೆಲೆಯಿಲ್ಲದೇ ಬಂದ ನನಗೆ ಚಿತ್ರರಂಗದಲ್ಲಿ ರಾಜ್‌ಕುಮಾರ್ ಹಾಗೂ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ನನ್ನಪಾಲಿನ ದೇವರುಗಳು… ಹೀಗೆಂದು ಹೇಳಿದ್ದು ಹಿರಿಯ ಚಿತ್ರನಟಿ, ಮಾಜಿ ಸಚಿವೆ ಜಯಮಾಲಾ ‘ವಿಶ್ವವಾಣಿ ಕ್ಲಬ್‌ಹೌಸ್’ ಸಂವಾದದಲ್ಲಿ ಭಾಗವಹಿಸಿದ್ದ ಜಯಮಾಲಾ ಅವರು, ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದ ನನಗೆ ರಾಜ್‌ಕುಮಾರ್ ಅವರು ಹಲವು ಅವಕಾಶ ನೀಡಿದರು. ಆದ್ದರಿಂದ ಅವರನ್ನು ನಾನು ದೇವರೆಂದು, ಪಾರ್ವತಮ್ಮ ಅವರನ್ನು ದೇವತೆಯೆಂದು ಭಾವಿಸಿದ್ದೇನೆ.

ಇನ್ನು ರಾಜಕೀಯದಲ್ಲಿ ನಾನು ವಿಧಾನಪರಿಷತ್ ಸದಸ್ಯೆಯಾಗಲು ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣ.  ಆದ್ದರಿಂದ ಅವರನ್ನು ನಾನು ರಾಜಕೀಯ ಪಾಲಿನ ದೇವರು ಎಂದುಕೊಂಡಿದ್ದೇನೆ. ಇದರೊಂದಿಗೆ ನನಗೆ ಸಚಿವೆ ಸ್ಥಾನ ನೀಡಿದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಎಂದು ಹೇಳಿದರು.

ರಾಜ್‌ಕುಮಾರ್ ಕಾಪಾಡಿದ ಆ ಕ್ಷಣ: ‘ವಿಶ್ವವಾಣಿ ಕ್ಲಬ್‌ಹೌಸ್’ ಸಂವಾದದಲ್ಲಿ ಭಾಗವಹಿಸಿದ್ದ ಜಯಮಾಲಾ ಅವರು ತಮ್ಮ ಜೀವನದ ಹಲವು ಘಟನೆಗಳನ್ನು ಮೆಲುಕು ಹಾಕುವಾಗ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರೊಂದಿಗೆ ಚಿತ್ರರಂಗ ದಲ್ಲಿ ಬೆಳೆದ ರೀತಿ, ಅವರೊಂದಿಗೆ ನಟಿಸಿದ ಚಿತ್ರಗಳ ಬಗ್ಗೆ ಮಾತನಾಡಿದರು. ಗಿರಿಕನ್ಯೆ ಚಿತ್ರದ ಚಿತ್ರೀಕರಣದ ವೇಳೆ, ನಾಯಕಿಯನ್ನು
ಜಲಪಾತದಿಂದ ನೂಕಿ ಸಾಯಿಸುವ ಸನ್ನಿವೇಶ. ಈ ವೇಳೆ ರಾಜ್‌ಕುಮಾರ್ ನಾಯಕಿಯನ್ನು ಕಾಪಾಡುವುದು ಸ್ಕ್ರಿಪ್ಟ್. ಆಗ ನನಗೆ ಹಗ್ಗ ಕಟ್ಟಿ ಜಲಪಾತದಿಂದ ದೂಡಿದರು. ಆದರೆ, ಸಾಹಸ ನಿರ್ದೇಶಕರಾದ ಶಿವಯ್ಯ ಎನ್ನುವರು ತಮ್ಮ ಸಹಾಯಕ ಸ್ವಾಮಿ ಅವರು ಹಗ್ಗ ಹಿಡಿದುಕೊಂಡಿದ್ದಾರೆ ಎಂದು, ಸ್ವಾಮಿ ಅವರು ಶಿವಯ್ಯ ಹಗ್ಗ ಹಿಡಿದಿದ್ದಾರೆ ಎಂದುಕೊಂಡು ಸುಮ್ಮನಿದ್ದರು.

ಇಬ್ಬರು ಹಿಡಿಯದೇ ಇರುವುದನ್ನು ಗಮನಿಸಿದ ರಾಜ್ ಕುಮಾರ್ ಅವರು ಕೂಡಲೇ ಬಂದು ಹಗ್ಗ ಹಿಡಿದು ಎಳೆದುಕೊಂಡರು. ಅವರು ಆ ಸಮಯ ಪ್ರಜ್ಞೆ ತೋರದಿದ್ದರೆ ಬಹುಶಃ ಅದೇ ನನ್ನ ಕೊನೆಯ ಚಿತ್ರವಾಗಿರುತ್ತಿತ್ತು ಎಂದು ನೆನಪು ಮಾಡಿ ಕೊಂಡರು.

ನಾನು ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕ: ನಾನು ಮಂಗಳೂರಿನ ಪಣಂಬೂರಿನಲ್ಲಿ ಹುಟ್ಟಿದೆ. ಬಂದರು ಮಾಡಬೇಕು ಎನ್ನುವ ಕಾರಣಕ್ಕೆ ನಮ್ಮನ್ನು ಎತ್ತಂಗಡಿ ಮಾಡಿದರು. ಅಲ್ಲಿಂದ ಚಿಕ್ಕಮಗಳೂರಿಗೆ ಬಂದೆ. ನನ್ನ ಅಕ್ಕನ ಜತೆ ಹಾಡುಗಾರ್ತಿಯಾಗಿದ್ದರಿಂದ, ಆಕೆಯಿಂದಲೇ ನೃತ್ಯ, ಸಂಗೀತ ಕಲಿತೆ. ಬಳಿಕ ಎಂಟನೇ ತರಗತಿಯ ವೇಳೆ 1973ರಲ್ಲಿ ತುಳುಚಿತ್ರದಲ್ಲಿ ನಟಿಸಿದೆ. ‘ಕಾಸ್‌ದಾಯಿ ಖಂಡನಿ’ ಎನ್ನುವ ಚಿತ್ರದಲ್ಲಿ ನಟಿಸಿದೆ. ಆಗಿನ್ನೂ ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ಅದಕ್ಕೂ ಮೊದಲು ನಾನು ಹಾಡಿ ದ್ದಕ್ಕೆ 10 ರು. ಹಾಗೂ ನೃತ್ಯಕ್ಕೆ 25ರು. ಸಂಭಾವನೆ ಪಡೆಯುತ್ತಿದ್ದೆ. ಬ್ಲ್ಯಾಕ್ ಆಂಡ್ ವೈಟ್ ಚಿತ್ರದಲ್ಲಿ ನಟಿಸಿದ್ದ ಕಾಸ್‌ದಾಯಿ ಖಂಡನಿ ಚಿತ್ರಕ್ಕೆ ಪ್ರಶಸ್ತಿ ಬಂತು. ತುಳುಕೂಟ ನೀಡಿದ ಈ ಪ್ರಶಸ್ತಿಯನ್ನು ನೀಡಿದ್ದು ಶಿವರಾಂ ಕಾರಂತರು ಎನ್ನುವುದು ನನ್ನ ಹೆಮ್ಮೆ ಎಂದು ಹೇಳಿದರು.

ಕನ್ನಡ ಚಿತ್ರರಂಗಕ್ಕೆ ನಾನು ಭೂತಯ್ಯನ ಮಗ ಅಯ್ಯಾ ಚಿತ್ರದಲ್ಲಿ ಒಂದು ನೃತ್ಯದ ಮೂಲಕ ಪ್ರವೇಶಿಸಿದೆ. 1975ರಲ್ಲಿ ‘ಯಾರು ಹಿತವರು’ ಎನ್ನುವ ಚಿತ್ರದಲ್ಲಿ ನಾನು ನಾಯಕಿಯಾಗಿದ್ದೆ. ಈ ಸಮಯದಲ್ಲಿ ವರದಣ್ಣ ನವರು ಪ್ರೇಮದ ಕಾಣಿಕೆಗೆ ನೂತನ ನಾಯಕಿ ಬೇಕು ಎಂದು ನನ್ನನ್ನು ಗುರುತಿಸಿದರು. ಬಳಿಕ ಬೆಂಗಳೂರಿನಲ್ಲಿ ಭೂತಯ್ಯನ ಮಗ ಅಯ್ಯಾ ಕಾರ್ಯಕ್ರಮಕ್ಕೆ ನಾನು ಹೋಗಿದ್ದ ಸಮಯದಲ್ಲಿ, ಪಾರ್ವತಮ್ಮ ರಾಜ್‌ಕುಮಾರ್ ಅವರು ಭೇಟಿ ಮಾಡಿ, ಮೇಕ್ ಅಪ್ ಟೆಸ್ಟ್‌ಗೆ ಬರುವಂತೆ ಹೇಳಿದರು.

ಬಳಿಕ ನನ್ನನ್ನು ಪ್ರೇಮದ ಕಾಣಿಕೆ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದರು. ಆಗ ನನಗೆ 16 ವರ್ಷ ವಯಸ್ಸು. ಇದಾದ ಬಳಿಕ ರಾಜ್ ಕುಮಾರ್ ಅವರೊಂದಿಗೆ ದಾರಿತಪ್ಪಿದ ಮಗ, ತ್ರಿಮೂರ್ತಿ, ಬಬ್ರುವಾಹನ, ಶಂಕರ್ ಗುರು, ಗಿರಿಕನ್ಯೆ ಸೇರಿದಂತೆ ಒಟ್ಟು ಏಳು ಚಿತ್ರದಲ್ಲಿ ನಟಿಸಿದೆ.

ರಾಜ್‌ಕುಮಾರ್ ಅವರೊಂದಿಗೆ ನಟಿಸಲು ಅನೇಕ ಸ್ಟಾರ್ ನಾಯಕಿಯರು ತುದಿಗಾಲಲ್ಲಿ ನಿಂತಿದ್ದರೂ, ನನಗೆ ಅವಕಾಶ ನೀಡಿ ದ್ದಕ್ಕೆ ರಾಜ್‌ಕುಮಾರ್ ಅವರಿಗೆ ನಾನು ಋಣಿ. ಅವರೊಂದಿಗೆ ನಟಿಸಿದ ಚಿತ್ರಗಳಿಂದ ನನ್ನನ್ನು ದೊಡ್ಡ ಸ್ಥಾನದಲ್ಲಿ ನಿಲ್ಲಿಸಿತ್ತು. ಎತ್ತಂಗಡಿ ಯಾಗಿ, ಚಿಕ್ಕ ಊರಿನಿಂದ ಬಂದ ನಾನು 75 ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಕೆನ್ನೆಗಿಲ್ಲಿದ್ದ ರಾಜ್‌ಕುಮಾರ್
ಡಾ. ರಾಜ್‌ಕುಮಾರ್ ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ನಮ್ಮೂರ ಶಾಲೆಯ ಬಳಿ. ಬಂಗಾರದ ಮನುಷ್ಯ ಚಿತ್ರ ದಲ್ಲಿ ಚಿತ್ರೀಕರಣದ ಸಮಯದಲ್ಲಿ, ಶಾಲೆಯ ಶಿಕ್ಷಕರು ಹೋಗಲು ಬಿಟ್ಟಿರಲಿಲ್ಲ. ಬಳಿಕ ಊಟದ ಸಮಯದಲ್ಲಿ ನಾನು ಹಾಗೂ ನನ್ನ ಸ್ನೇಹಿತರು ಓಡಿ ಹೋಗಿದ್ದೇವು.

ನಾನು ರಾಜ್‌ಕುಮಾರ್ ಬಳಿ ಆಟೋಗ್ರಾಫ್ ಕೇಳಿದಾಗ, ನನ್ನ ಕೆನ್ನೆ ಗಿಲ್ಲಿ ನನ್ನ ಹೆಸರನ್ನು ಕೇಳಿದ್ದರು. ಬಳಿಕ ಅವರು ಮೇಕ್‌ಅಪ್
ಟೆಸ್ಟ್‌ಗೆ ಹೋಗಿದ್ದ ಸಮಯದಲ್ಲಿ ನನ್ನನ್ನು ಗುರುತು ಹಿಡಿದರು. ಇದು ರಾಜ್‌ಕುಮಾರ್ ಅವರ ನೆನಪಿನ ಶಕ್ತಿಗೆ ಉದಾಹರಣೆ ಎಂದರು. ಇನ್ನು ಕೇಳುಗರೊಬ್ಬರು ಇಷ್ಟದ ಚಿತ್ರ, ಖುಷಿಕೊಟ್ಟ ಸನ್ನಿವೇಶದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಜಯಮಾಲಾ ಅವರು, ಕಲಾವಿದನಿಗೆ ತಾನು ನಟಿಸಿದ ಪ್ರತಿ ಚಿತ್ರವೂ ಇಷ್ಟವೇ.

ಚಿತ್ರೀಕರಣದಲ್ಲಿ ಅನೇಕ ಘಟನೆಗಳು ಮರೆಯಲು ಸಾಧ್ಯವೇ ಇಲ್ಲ. ಇನ್ನು ನೋವಿನ ಸನ್ನಿವೇಶದ ಬಗ್ಗೆ ಹೇಳಿಕೊಳ್ಳುವುದಕ್ಕಿಂತ, ನನ್ನೊಂದು ಹೋಗುವುದು ಸೂಕ್ತ ಎನಿಸುತ್ತದೆ. ಖುಷಿಯ ವಿಷಯದ ಬಗ್ಗೆ ಹೇಳುವುದಾದರೆ, ಡಾ. ರಾಜ್‌ಕುಮಾರ್ ಅವರೊಂದಿಗೆ ರಾಜ್ಯದ ಹಲವು ಭಾಗಕ್ಕೆ ಮ್ಯೂಸಿಕಲ್ ನೈಟ್‌ಗೆ ಹೋಗುತ್ತಿದ್ದೆ. ಅಲ್ಲಿ ಸಾವಿರಾರು ಜನ ಸೇರಿ ಅವರು ನಮಗೆ ನೀಡುತ್ತಿದ್ದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಸಚಿವೆ ಸ್ಥಾನ ಹೋಗಿದ್ದಕ್ಕೆ ಬೇಸರವಿಲ್ಲ
ಸಮ್ಮಿಶ್ರ ಸರಕಾರದ ಅವಽಯಲ್ಲಿ ಸಚಿವೆ ಸ್ಥಾನ ಹೋದ ಸಮಯದಲ್ಲಿ ಬೇಸರವಾಯಿತೇ ಎನ್ನುವ ಕೇಳುಗರೊಬ್ಬರ ಪ್ರಶ್ನೆಗೆ ಉತ್ತರಿಸಿದ ಜಯಮಾಲಾ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸ್ಥಿರವಾಗಿರಲಿಲ್ಲ. ಪ್ರತಿಪಕ್ಷಗಳು ಆಗಾಗ್ಗೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದವು. ಆದ್ದರಿಂದ ಇಂದು-ನಾಳೆ ಎನ್ನುವ ಮಾತುಗಳಿದ್ದವು. ನನಗೆ ಎಷ್ಟು ದಿನ ಸಚಿವೆ
ಯಾಗಿರುತ್ತೇನೆ ಎನ್ನುವುದಕ್ಕಿಂತ, ಇರುವಷ್ಟು ದಿನ ಉತ್ತಮ ಯೋಜನೆ ನೀಡಬೇಕು ಎನ್ನುವ ಯೋಚನೆಯಲ್ಲಿದ್ದೆ. ಆದ್ದರಿಂದ ಸಚಿವ ಸ್ಥಾನ ಹೋದಾಗಲೂ ನನಗೆ ಬೇಸರವಾಗಲಿಲ್ಲ. ಆದರೆ, ದಮನಿತ ಮಹಿಳೆಯರಿಗೆಂದು ರೂಪಿಸಿದ್ದ ಯೋಜನೆ
ಅನುಷ್ಠಾನ ವಾಗಿಲ್ಲ ಎನ್ನುವ ಕೊರಗು ಇದೆ ಎಂದರು.

***

ಮಾಧ್ಯಮಗಳ ಮೇಲೆ ನನಗೆ ಗೌರವವಿದೆ. ಆದರೆ, ಇಂದಿನ ಕಾಂಪಿಟೇಷನ್ ಯುಗದಲ್ಲಿ ಕೆಲ ಮಾಧ್ಯಮಗಳು ಅವಸರಕ್ಕೆ ಬಿದ್ದು ಕೆಲಸ ಮಾಡುತ್ತಿವೆ. ಇಂತಹವರು ವ್ಯವಧಾನವನ್ನು ಹೊಂದಬೇಕಾಗುತ್ತದೆ. ಅದನ್ನು ಹೊರತು, ಮಾಧ್ಯಮದ ಮೇಲೆ ಅಪಾರ ವಾದ ಗೌರವವಿದೆ.
– ಡಾ. ಜಯಮಾಲಾ ಹಿರಿಯ ನಟಿ